ಬೆಂಗಳೂರು:ದೇಶದ ಬೇರೆ ರಾಜ್ಯಗಳಿಂದ ಸಿಲಿಕಾನ್ ಸಿಟಿಗೆ ಪ್ರತಿ ವರ್ಷ ಅಂದಾಜು 4 ಲಕ್ಷ ವಲಸಿಗರು ಬರುತ್ತಿದ್ದಾರೆ. ವಲಸಿಗರ ಜತೆ ನಾವೆಲ್ಲರೂ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸುವಂತಾಗಬೇಕು ಎಂದು ಬೆಂಗಳೂರು ಟ್ರೇಡ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಭೂಪಾಳಂ ಶ್ರೀನಾಥ್ ಸಲಹೆ ನೀಡಿದ್ದಾರೆ.
ಬೆಂಗಳೂರು ಟ್ರೇಡ್ಸ್ ಅಸೋಸಿಯೇಷನ್ ಮಹಾತ್ಮ ಗಾಂಧಿ ರಸ್ತೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ "ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಭಾಷಿಕರಿಗೆ ಕನ್ನಡ ಕಲಿಯಲು ಪ್ರೋತ್ಸಾಹ ನೀಡುವಂತಾಗಬೇಕು. ನಾವೆಲ್ಲರೂ ಕಡ್ಡಾಯವಾಗಿ ಕನ್ನಡ ಮಾತಾಡುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಲು ಮುಂದಾಗಬೇಕಿದೆ. ಪ್ರತಿ ವರ್ಷ ತಪ್ಪದೆ ಸಂದ ಕಾರ್ಯಕ್ರಮದ ಜತೆಗೆ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬರುವ ದಿನಗಳಲ್ಲಿ ಸಂಘ ನಡೆದಕೊಂಡು ಬಂದಿರುವ ಹಾದಿ ಕುರಿತು "ಕಾಫಿ ಟೇಬಲ್' ಪುಸ್ತಕ ಹೊರತರಲು ಎಲ್ಲರೂ ಶ್ರಮಿಸಬೇಕೆಂದು ಸಲಹೆ ನೀಡಿದರು.
ಸಂಘದ ಉಪಾಧ್ಯಕ್ಷ ವಿಜಯ ಶೇಖರ್ ರವಿ, ಮಾಜಿ ಅಧ್ಯಕ್ಷ ಪಳನಿಯಪ್ಪನ್, ಸಂದ ಪದಾಧಿಕಾರಿ ಸುರೇಶ್ ದೇಸಾಯಿ, ವಿಜಯಲಕ್ಷ್ಮೀ ಸಿಲ್ಕ್ನ ಪ್ರಸನ್ನ ಮತ್ತಿತರರಿದ್ದರು.
ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಂಘದ ಮೇಲಿದೆ. ಮಹಾತ್ಮ ಗಾಂಧಿ ರಸ್ತೆಯಲ್ಲಿ ಕನ್ನಡದ ಕಂಪು ಪಸರಿಸುವ ಜತೆಗೆ ಪರಭಾಷಿಕರಿಗೆ ಕನ್ನಡ ಕಲಿಸುವ ಕಾರ್ಯವನ್ನು ಸಂಘ ಇನ್ನಷ್ಟು ಮಾಡುವಂತಾಗಲಿ. ರಾಜ್ಯೋತ್ಸವ ಸಂಬಂಧ ಸಂಘದ ನಡೆಸುವ ಕಾರ್ಯಚಟುವಟಿಕೆಗಳಿಗೆ ನಮ್ಮ ಪತ್ರಿಕೆಯ ಸಹಕಾರ ಸದಾ ಇರಲಿದೆ. ಸಂದ ಸಹಭಾಗಿತ್ವದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಚರಿಸಲು ನಾವೆಲ್ಲರೂ ಸಿದ್ಧರಿದ್ದೇವೆ.
| ಕೆ.ಎನ್.ಚನ್ನೇಗೌಡ. ಸಂಪಾದಕ ವಿಜಯವಾಣಿ
ನಮ್ಮ ಸಂಘವನ್ನು ಬ್ರಿಟಿಷರು ಆರಂಭ ಮಾಡಿದ್ದರು. ಇದೀಗ ಸಂಘಕ್ಕೆ 125 ವರ್ಷ ತುಂಬಿದೆ. ನಮ್ಮ ಸಂಘ ದೇಶದಲ್ಲೇ ಹಳೆಯ ಸಂಘ ಎಂಬ ಹೆಗ್ಗಳಿಕೆ ಹೊಂದಿದೆ. ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ರಾಜ್ಯೋತ್ಸವ ಸಂಬಂಧ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸಲು ಸಿದ್ಧರಿದ್ದೇವೆ.
| ಶ್ರೀಶ್ ಬಾಬು. ಬೆಂಗಳೂರು ಟ್ರೇಡ್ಸ್ ಅಸೋಸಿಯೇಷನ್ ಅಧ್ಯಕ್ಷ