ಬೆಂಗಳೂರು: ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಕ್ಷಣಗಣನೆ ಶುರುವಾಗಿರುವಾಗ, ಪ್ರತಿಪಕ್ಷಗಳಾಗಿ ರಾಜ್ಯದ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸರ್ಕಾರದ ಕಣ್ತೆರೆಸಿ ಸಂಕಷ್ಟಗಳನ್ನು ಬಗೆಹರಿಸಲು ಒಗ್ಗಟ್ಟಿನಿಂದ ಕಾರ್ಯತಂತ್ರ ರೂಪಿಸಬೇಕಾದ ವಿಪಕ್ಷಗಳ ಪ್ರಮುಖ ನಾಯಕರಿಬ್ಬರು ಹೊಣೆಗಾರಿಕೆ ಮರೆತು ಟೀಕೆ, ಪ್ರತಿಟೀಕೆ ಮೂಲಕ ಪರಸ್ಪರ ಕಾಲೆಳೆದುಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ಒಂದೂವರೆ ವರ್ಷದ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಹೊಸ ಯುದ್ಧ ಸಾರಿರುವುದು ಕಳೆದು ಕೊಂಡಿರುವ ರಾಜಕೀಯ ವರ್ಚಸ್ಸನ್ನು ಮತ್ತೆ ಪಡೆದು ಕೊಳ್ಳುವ ತಂತ್ರವೆಂದೇ ವಿಶ್ಲೇಷಿಸಲಾಗುತ್ತಿದೆ.
ಮೈತ್ರಿ ಸರ್ಕಾರದ ಪತನ ಬಳಿಕ ಹಾವು-ಮುಂಗುಸಿಯಂತಾಗಿರುವ ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ವಾಕ್ಸಮರ ರೋಚಕ ಘಟ್ಟ ತಲುಪಿದೆ. ಯಡಿಯೂರಪ್ಪ ಸಿಎಂ ಆದ ಮೇಲೆ ಬಿಜೆಪಿ ಬಗ್ಗೆ ತುಸು ಮೃದು ಧೋರಣೆ ತಳೆದಿರುವ ಕುಮಾರಸ್ವಾಮಿಗೆ ಈಗ ಸಿದ್ದರಾಮಯ್ಯ ಅವರೇ ನೇರ ಟಾರ್ಗೆಟ್. ಉಪ ಚುನಾವಣೆ ಸೋಲಿನ
ನಂತರವಂತೂ ಕುಮಾರಸ್ವಾಮಿ ಕಾಂಗ್ರೆಸ್ ಅದರಲ್ಲೂ ವಿಶೇಷವಾಗಿ ಪ್ರತಿಪಕ್ಷ ನಾಯಕರ ವಿರುದ್ಧ ಸಮಯ ಸಿಕ್ಕಾಗಲೆಲ್ಲ ಮುಗಿಬೀಳುತ್ತಿದ್ದಾರೆ. ತಮ್ಮೆಲ್ಲ ಸೋಲಿಗೆ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಕೆಂಡಕಾರುತ್ತಿದ್ದಾರೆ.
ಸಿದ್ದರಾಮಯ್ಯ ಸಹ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡುತ್ತಿದ್ದಾರೆ. ಅವರಿಗೆ ಆಡಳಿತ ಪಕ್ಷ ಬಿಜೆಪಿಗಿಂತ ಹಳೆಯ ದೋಸ್ತಿ ಜೆಡಿಎಸ್ ಮೊದಲ ಶತ್ರುವಾಗಿದೆ.
ಬಲೆಯಲ್ಲಿ ಬಿದ್ದು ಹಾಳಾದೆ: ‘ಮಾಜಿ ಸಿಎಂ ಸಿದ್ದರಾಮಯ್ಯ ಪೂರ್ವಯೋಜಿತವಾಗಿ ರೂಪಿಸಿದ ಬಲೆಯಲ್ಲಿ ಬಿದ್ದು ನಾನು ಹಾಳಾದೆ. ನನ್ನ ಗುಡ್ವಿಲ್ಗೆ ಕಲ್ಲು ಹಾಕಿದರು’ಎಂದು ಕುಮಾರಸ್ವಾಮಿ ಮೈಸೂರಿನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಬಿಜೆಪಿ ಜತೆಗೆ ಸಂಬಂಧ ಇಟ್ಟುಕೊಂಡಿದ್ದರೆ ಇವತ್ತಿಗೂ ನಾನೇ ಮುಖ್ಯಮಂತ್ರಿಯಾಗಿರುತ್ತಿದ್ದೆ’ ಎಂದು ಹೇಳಿರುವುದು ಬಿಜೆಪಿಯಲ್ಲಿಯೂ ಚರ್ಚೆಗೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಗುಡ್ವಿಲ್ ಇದ್ದರೆ ತಾನೆ ಹಾಳಾಗುವುದು. ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಯಾವುದೇ ಸತ್ಯವಿಲ್ಲ. ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾರೆ’ ಎಂದು ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಸತ್ಯ ಸಂಗತಿಗಳನ್ನು ಹೇಳುತ್ತಿದ್ದಾರೆ. | ಯಡಿಯೂರಪ್ಪ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ತಡವಾಗಿ ಜ್ಞಾನೋದಯ ಆಗಿದೆ. | ನಳಿನ್ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ
ಕುಮಾರಸ್ವಾಮಿ
ಸಿದ್ದರಾಮಯ್ಯ
ಪಶ್ಚಾತ್ತಾಪದ ಅಸ್ತ್ರ?
ಕಳೆದ ವಿಧಾನಸಭೆ ಚುನಾವಣೆ ಫಲಿ ತಾಂಶದ ಬಳಿಕ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿ ಗಾದಿ ಹಿಡಿದಿದ್ದ ಎಚ್ಡಿಕೆ ನಿಲುವಿಗೆ ಜೆಡಿಎಸ್ನಲ್ಲಿ ತೀವ್ರ ವಿರೋಧ, ಆಕ್ರೋಶ ವ್ಯಕ್ತವಾಗಿತ್ತು. ಈ ಅಧಿಕಾರಮೋಹದಿಂದ ಕಾಂಗ್ರೆಸ್ಗೆ ಲಾಭವಾದರೆ ಜೆಡಿಎಸ್ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದೆಂದು ಕಾರ್ಯಕರ್ತರು ಧ್ವನಿ ಎತ್ತಿದ್ದರು. ಆ ನಡುವೆಯೇ ಅಧಿಕಾರ ಮುಂದುವರಿಸಿದ್ದರ ಪರಿಣಾಮವಾಗಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ತೀವ್ರ ಹಿನ್ನಡೆ ಅನುಭವಿಸಿತ್ತು. ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ತಾವು ಮಾಡಿದ ತಪ್ಪನ್ನು ಅರಿತಿರುವ ಎಚ್ಡಿಕೆ ರಾಜಕೀಯವಾಗಿ ಕಳೆದುಕೊಂಡಿರುವ ವರ್ಚಸ್ಸು, ಭವಿಷ್ಯವನ್ನು ಪಡೆಯಲು ಮಾಜಿ ದೋಸ್ತಿ (ಕಾಂಗ್ರೆಸ್ ) ವಿರುದ್ಧ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಜತೆಗಿನ ಸ್ನೇಹದ ಪರಿಣಾಮದ ಪಶ್ಚಾತ್ತಾಪದ ಅಸ್ತ್ರವನ್ನು ರಾಜಕೀಯವಾಗಿ ಪ್ರಯೋಗಿಸುವ ಮೂಲಕ ಮುಂದಿನ ಹಾದಿ ಸುಗಮಗೊಳಿಸಲು ಯತ್ನಿಸಿದ್ದಾರೆ. ಉಪಚುನಾವಣೆ ಸೋಲಿನ ಬಳಿಕ, ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಎಚ್ಡಿಕೆ ಜೆಡಿಎಸ್ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟು ಕೊಂಡು ಈ ದಾಳ ಉರುಳಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.