ತಾಳಿಕೋಟೆ: ಪಟ್ಟಣದ 4 ಸ್ಥಳಗಳಲ್ಲಿ ನಾಡದೇವಿ ಮೂರ್ತಿಗಳನ್ನು ಗುರುವಾರ ಭಕ್ತಿ ಭಾವದೊಂದಿಗೆ ಪ್ರತಿಷ್ಠಾಪಿಸಲಾಯಿತು.
ರಜಪೂತ ಸಮಾಜದಿಂದ ರಜಪೂತ ಬಡಾವಣೆಯಲ್ಲಿ, ನವರಾತ್ರೋತ್ಸವ ಸಮಿತಿಯಿಂದ ಕಾಮನಕಟ್ಟಿ ಬಡಾವಣೆಯಲ್ಲಿ, ದಸರಾ ಉತ್ಸವ ಕಮಿಟಿಯಿಂದ ವಿಠ್ಠಲ ಮಂದಿರದಲ್ಲಿ ಹಾಗೂ ಶ್ರೀದೇವಿ ಮಾತೃಮಂಡಳಿ ಮತ್ತು ಹಿಂದು ಮಹಾಗಣಪತಿ ಮಹಾ ಮಂಡಳಿಯಿಂದ ನೇತೃತ್ವದಲ್ಲಿ ತಿಲಕ ರಸ್ತೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಯಿತು.
ಅರ್ಚಕರಿಂದ ಶ್ರೀದೇವಿಗೆ ಮಹಾಪೂಜೆ, ಘಟಸ್ಥಾಪನೆ ಕಾರ್ಯಕ್ರಮ ಜರುಗಿದವು. ನವರಾತ್ರೋತ್ಸವ ಅಂಗವಾಗಿ ಪ್ರತಿದಿನ ಶ್ರೀದೇವಿಯ ವಿವಿಧ ಪೂಜಾ ಕಾರ್ಯಕ್ರಮ, ಮಹಿಳೆಯರಿಗಾಗಿ ಮನರಂಜನೆ, ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ ಜರುಗಲಿವೆ. ಪಟ್ಟಣದ ಕ್ಷತ್ರೀಯ ಮರಾಠಾ ಸಮಾಜದ ಶಿವಭವಾನಿ ಮಂದಿರ ಹಾಗೂ ಖಾಸ್ಗತೇಶ್ವರ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಶ್ರೀದೇವಿಯ ಮಹಾ ಪುರಾಣ ಕಾರ್ಯಕ್ರಮ ಜರುಗಲಿದೆ.
ರಜಪೂತ ಸಮಾಜದ ಅಂಬಾಭವಾನಿ ದೇವಸ್ಥಾನ, ಭಾವಸಾರ ಕ್ಷತ್ರೀಯ ಸಮಾಜದ ಅಂಬಾಭವಾನಿ ಮಂದಿರ, ಗೋಂದಳಿ ಸಮಾಜದ ಅಂಬಾಭವಾನಿ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿವೆ.