ಜಿಲ್ಲೆ

ಸದಸ್ಯೆಯಿಂದ ಮುಖ್ಯಾಧಿಕಾರಿ ತರಾಟೆಗೆ

Vijayapura

ತಾಳಿಕೋಟೆ: ಪಟ್ಟಣದ ವಾರ್ಡ್ ನಂ. 19ರ ಸ್ಲಂ ಬಡಾವಣೆ ಜನರಿಗೆ ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುತ್ತಿರುವ ನಂದಿನಿ ಹಾಲಿನ ಪಾಕೆಟ್ ವಿತರಣೆಯಲ್ಲಿ ಬೇರೆ ವಾರ್ಡ್‌ನ ಬಿಜೆಪಿ ಸದಸ್ಯ ವಾಸುದೇವ ಹೆಬಸೂರ ನೇತೃತ್ವದಲ್ಲಿ ವಿತರಿಸಿದ್ದಕ್ಕೆ ಆಕ್ರೋಶಗೊಂಡ ಪುರಸಭೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ ಶನಿವಾರ ಬೆಳಗ್ಗೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾವು ಪ್ರತಿನಿಧಿಸುತ್ತಿರುವ ವಾರ್ಡ್‌ನಲ್ಲೇ ಪುರಸಭೆ ಮುಖ್ಯಾಧಿಕಾರಿ ಬೇರೆ ಬೇರೆ ವಾರ್ಡ್‌ನ ಬಿಜೆಪಿ ಸದಸ್ಯರನ್ನು ಕರೆದುಕೊಂಡು ಬಡ ಜನರಿಗೆ ಹಾಲು ವಿತರಿಸುತ್ತಿದ್ದಾಗ ಸದಸ್ಯೆ ಅಕ್ಕಮಹಾದೇವಿ ತಡೆದರು.

ಸರ್ಕಾರದಿಂದ ನೀಡಲಾಗಿರುವ ಹಾಲಿನ ಪಾಕೆಟ್ ವಿತರಣೆಯಲ್ಲಿ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ. ನೀವು ಒಬ್ಬ ಅಧಿಕಾರಿ, ಜನರಿಗೆ ತಪ್ಪು ಸಂದೇಶ ಹೋಗುವುದನ್ನು ತಡೆಯಬೇಕು. ಆದರೆ, ನೀವು ಯಾವುದೋ ವಾರ್ಡ್‌ನ ಬಿಜೆಪಿ ಸದಸ್ಯರನ್ನು ಕರೆದುಕೊಂಡು ಮತ್ತೊಂದು ವಾರ್ಡ್‌ನಲ್ಲಿ ಹಾಲು ಹಂಚುತ್ತಿರುವುದು ಎಷ್ಟು ಸರಿ? ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಬಿಜೆಪಿ ಸದಸ್ಯ ವಾಸುದೇವ ಹೆಬಸೂರ ತನ್ನ ಮನೆಯಿಂದ ಹಾಲು ಕೊಡುತ್ತಿಲ್ಲ. ಇದನ್ನು ಮನದಲ್ಲಿ ಇಟ್ಟುಕೊಳ್ಳಿರಿ. ಪಾಳೆಗಾರಿಕೆ ಸಂಸ್ಕೃತಿ ಅನುಸರಿಸಲು ಬಂದರೆ ನಾನು ಸುಮ್ಮನಿರಲ್ಲ ಎಂದು ಮುಖ್ಯಾಧಿಕಾರಿಗೆ ಎಚ್ಚರಿಸಿದರು.

ಕ್ಷಮೆಯಾಚಿಸಿದ ಮುಖ್ಯಾಧಿಕಾರಿ

ನಮ್ಮ ಪುರಸಭೆ ಅಧಿಕಾರಿಗಳೊಂದಿಗೆ ಸರ್ಕಾರದ ಸೂಚಿತ ಸ್ಲಂ ಬಡಾವಣೆಗಳಲ್ಲಿಯ ಜನರಿಗೆ ಹಾಲು ವಿತರಿಸಲು ನಸುಕಿನಲ್ಲಿ ಬಂದಿದ್ದೇವೆ. ನಾವು ಯಾವ ಸದಸ್ಯರನ್ನೂ ಕರೆದಿಲ್ಲ. ಆದರೆ, ಅವರೇ ಬಂದು ಮುಂದಾಳತ್ವ ವಹಿಸಿ ಹಾಲು ವಿತರಿಸಿದ್ದಾರೆ. ಹಾಲು ವಿತರಣೆಯಲ್ಲಿ ಇವತ್ತು ಆಗಿರುವ ಲೋಪ ಒಪ್ಪಿಕೊಂಡ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಅವರು ಕಟ್ಟಿಮನಿ ಅವರಲ್ಲಿ ಕ್ಷಮೆಯಾಚಿಸಿದರು.

ಸದಸ್ಯ ವಾಸುದೇವ ತರಾಟೆಗೆ

19ನೇ ವಾರ್ಡ್‌ನ ಸ್ಲಂ ಬಡಾವಣೆ ಜನರಿಗೆ ಸರ್ಕಾರದಿಂದ ಉಚಿತವಾಗಿ ಪೂರೈಸಿದ ಹಾಲು ವಿತರಣೆಯಲ್ಲಿ ಭಾಗಿಯಾಗಿದ್ದಕ್ಕೆ ವಾರ್ಡ್ ನಂ. 3ರ ಸದಸ್ಯ ವಾಸುದೇವ ಹೆಬಸೂರ ಅವರನ್ನು ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು.