ತಾಳಿಕೋಟೆ: ಪಟ್ಟಣದ ತಿಲಕ ರಸ್ತೆ ಬಡಾವಣೆಯಲ್ಲಿ ಹಿಂದು ಮಹಾ ಗಣಪತಿ ಮಹಾ ಮಂಡಳಿಯ 11ನೇ ವರ್ಷದ ವಾರ್ಷಿಕ ಸಂಭ್ರಮ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಗಣೇಶ ಮೂರ್ತಿಯನ್ನು ಶನಿವಾರ ಪ್ರತಿಷ್ಠಾಪಿಸಲಾಯಿತು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಅಂಬಾಭವಾನಿ ಮಂದಿರದಿಂದ ಗಣೇಶ ಉತ್ಸವದ ಭವ್ಯ ಮೆರವಣಿಗೆಗೆ ಕೆಸರಟ್ಟಿ ಶಂಕರಲಿಂಗ ಮಠದ ಸೋಮಲಿಂಗ ಸ್ವಾಮಿಗಳು, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಎಂ.ಎಸ್.ಸರಶೆಟ್ಟಿ ಹಾಗೂ ಪುರಸಭೆ ಸದಸ್ಯರು, ಮುಖಂಡರು ಚಾಲನೆ ನೀಡಿದರು.
ಮೆರವಣಿಗೆ ಕತ್ರಿ ಬಜಾರ್ ಮಾರ್ಗವಾಗಿ ಶಿವಾಜಿ ಮಹಾರಾಜರ ವೃತ್ತ, ಮಹಾರಾಣಾ ಪ್ರತಾಪಸಿಂಹ ವೃತ್ತದ ಮೂಲಕ ತಿಲಕ ರಸ್ತೆಯಲ್ಲಿನ ಗಣೇಶ ಪ್ರತಿಷ್ಠಾಪನಾ ಮಂಟಪ ತಲುಪಿದ ನಂತರ ಪ್ರತಿಷ್ಠಾಪಿಸಲಾಯಿತು.
ಪಟ್ಟಣದಲ್ಲಿ ಒಟ್ಟು 28 ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳನ್ನು ವಿವಿಧ ತರುಣ ಸಂಘಗಳ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗಿದೆ. 5ನೇ ದಿನಕ್ಕೆ 17 ಗಣೇಶ ಮೂರ್ತಿಗಳು ಹಾಗೂ 7ನೇ ದಿನಕ್ಕೆ 10 ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳಲಿವೆ. 9ನೇ ದಿನಕ್ಕೆ ತಿಲಕ ರಸ್ತೆಯಲ್ಲಿ ಹಿಂದು ಮಹಾ ಗಣಪತಿ ಮಹಾ ಮಂಡಳಿಯ ಗಣೇಶ ಮೂರ್ತಿ ವಿಸರ್ಜನೆಗೊಳ್ಳಲಿದೆ.
ತಾಳಿಕೋಟೆ ಪಟ್ಟಣ ಸೇರಿ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಒಟ್ಟು 170 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಎಲ್ಲ ಗಣೇಶ ಮೂರ್ತಿಗಳ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಗಣೇಶೋತ್ಸವ ತರುಣ ಸಂಘದ ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಪೊಲೀಸ್ ಹಾಗೂ ಹೋಮ್‌ಗಾರ್ಡ್ಸ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಪಿಎಸ್‌ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ ತಿಳಿಸಿದ್ದಾರೆ.