ಜಿಲ್ಲೆ

ದೇಶ-ವಿದೇಶಗಳಲ್ಲಿ ಮಿಂಚಿದ ಕದರೀಪುರದ ಪ್ರತಿಭೆ

 ನಾಲ್ಕು ಚಿನ್ನದ ಪದಕ, ನೂರಾರು ಪ್ರಶಸ್ತಿಯ ಮುಡಿಗೇರಿಸಿಕೊಂಡ ಪ್ರತಿಭೆ ನಾಗೇಶ್​

ಬೇತಮಂಗಲ: ಕುಗ್ರಾಮವೊಂದರಲ್ಲಿ ಹುಟ್ಟಿದ ಈ ಕ್ರೀಡಾಪಟು ದೇಶ&ವಿದೇಶಗಳಲ್ಲಿನ ವಿವಿಧ ಕ್ರೀಡೆಗಳಲ್ಲಿ ಛಾಪು ಮೂಡಿಸುವ ಮೂಲಕ ದೇಶಕ್ಕೆ, ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದು, ಅಮೆರಿಕ ಸೇರಿ ಹಲವು ದೇಶಗಳಲ್ಲಿ ಚಿನ್ನದ ಪದಕ, ನೂರಾರು ಪುರಸ್ಕಾರ ಪಡೆದು ಎಲೆಮರೆಕಾಯಿಯಂತೆ ಸದ್ದಿಲ್ಲದೇ ಸಾಧನೆಯ ಶಿಖರ ಏರಿದ್ದಾರೆ.

ಕೆಜಿಎಫ್​ ತಾಲೂಕು ಕ್ಯಾಸಂಬಳ್ಳಿ ಹೋಬಳಿಯ ಕದರೀಪುರದ 40 ವರ್ಷದ ನಾಗೇಶ್​ ಅವರೇ ಸಾಧಕ. ನಾರಾಯಣಪ್ಪ, ರತ್ನಮ್ಮ ಪುತ್ರನಾಗಿರುವ ನಾಗೇಶ್​ ಹುಟ್ಟಿನಿಂದಲೇ ಕುಬ್ಜರಾಗಿದ್ದು, 3 ಅಡಿ ಎತ್ತರವಿದ್ದಾರೆ. ಪದವಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ನಾಗೇಶ್​ ಕಾಲೇಜು ಹಂತದಲ್ಲಿ ಕ್ರೀಡೆ ಬಗ್ಗೆ ಹೆಚ್ಚು ಒಲವು ಮೂಡಿ, 2008ರಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್​ನಲ್ಲಿ ಮೊಟ್ಟ ಮೊದಲಬಾರಿಗೆ ಭಾಗವಹಿಸಿ, ಬ್ಯಾಡ್ಮಿಂಟನ್​ನಲ್ಲಿ ಸಿಂಗಲ್​ ಮತ್ತು ಡಬ್ಬಲ್​ನಲ್ಲಿ ಎರಡು ಪದಕ ಪಡೆಯುತ್ತಾರೆ. 2013ರಲ್ಲಿ ವಿಶ್ವಮಟ್ಟದ ಕುಬ್ಜರ ಕ್ರೀಡಾಕೂಟದ ಗುಂಪು ಕ್ರೀಡೆಯಲ್ಲಿ ಪದಕ ಪಡೆದಿದ್ದರು. ಕೆನಡಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ನಾಗೇಶ್​ ಓಟ, ಡಿಸ್ಕಸ್​ ಥ್ರೋ, ಜಾವಲಿನ್​ ಥ್ರೋ, ಶಾಟ್​ಪುಟ್​ನಲ್ಲಿ ಭಾಗವಹಿಸಿ 6 ಪದಕ ಪಡಿದಿದ್ದರು. ಅದರಲ್ಲಿ 1 ಚಿನ್ನ, 1 ಬೆಳ್ಳಿ ಮತ್ತು ಕಂಚು ಗಳಿಸಿದ್ದರು. 2023ರಲ್ಲಿ ಜರ್ಮನಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಡಿಸ್ಕಸ್​ ಥ್ರೋ, ಜಾವಲಿನ್​ ಥ್ರೋ, ಶಾಟ್​ಪುಟ್​ಗಳಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದು, ಪವರ್​ ಲಿಫ್ಟಿಂಗ್​ನಲ್ಲಿ ಬೆಳ್ಳಿ ಗಳಿಸಿದ್ದಾರೆ.

ಬದುಕು ಕಟ್ಟಿದ ಕಲಾವೃತ್ತಿ

ನೂರಾರು ಪುರಸ್ಕಾರ ಪಡೆದಿದ್ದರೂ ಜೀವನೋಪಾಯಕ್ಕೆ ಕಲಾವಿದನಾಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಇದ್ದಾರೆ. ತಂದೆ&ತಾಯಿ ಮಡದಿ ಮಕ್ಕಳನ್ನು ಪೋಷಣೆ ಮಾಡಲು ಯಾವ ಸಾಧನೆಯೂ ಉಪಯೋಗಕ್ಕೆ ಬಂದಿಲ್ಲ. ಪ್ರತಿಭೆ ಮತ್ತು ಸಾಧನೆಗಾಗಿ ಯಾವುದಾದರೂ ಉದ್ಯೋಗ ನೀಡಬಹುದು ಅಥವಾ ಆರ್ಥಿಕ ಸಹಕಾರ ಸಿಗಬಹುದು ಎಂದು ಸರ್ಕಾರದ ಬೆನ್ನ ಹಿಂದೆ ಬಿದ್ದು ಬೇಸತ್ತ ನಾಗೇಶ್​ ಹಲವಾರು ವರ್ಷಗಳಿಂದ ಕಲಾವಿದನಾಗಿ ಕೆಲಸ ಮಾಡುತ್ತಿದ್ದಾರೆ. ಆರ್ಕೆಸ್ಟ್ರಾಗಳಲ್ಲಿ ಕುಬ್ಜ ನಟನಾಗಿ, ಹಾಸ್ಯ ಮತ್ತು ವಿವಿಧ ಮನರಂಜನೆ ಕಾರ್ಯಕ್ರಮಗಳ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

ಕಳೆದ 20 ವರ್ಷಗಳಿಂದ ಕಠಿಣ ಪರಿಶ್ರಮದಿಂದ ಅಪಾರ ಸಾಧನೆ ಮಾಡುವ ಮೂಲಕ ಹುಟ್ಟೂರು ಸೇರಿ ಕರ್ನಾಟಕ ರಾಜ್ಯ ಮತ್ತು ಭಾರತಕ್ಕೆ ಕೀರ್ತಿ ತಂದಿವೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಪ್ರತಿಭೆ ಗುರುತಿಸಿ ಯಾವುದಾದರೂ ಸರ್ಕಾರಿ ಉದ್ಯೋಗ ಮತ್ತು ಸಾಧನೆಗೆ ತಕ್ಕ ಗೌರವ ಸಿಗಬಹುದೆಂಬ ನಿರೀೆ ಇದೆ. | ನಾಗೇಶ್​

ಹಲವು ಹತ್ತು ಪುರಸ್ಕಾರಗಳು ನಾಗೇಶ್​ ಹಲವು ಪ್ರಶಸ್ತಿ ಪುರಸ್ಕಾರ ಪಡೆದಿದ್ದು, ರಾಜ್ಯ ಸರ್ಕಾರದ ಕಾಲೇಜು ಶಿಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ನಾಗೇಶ್​ ಅವರ ವೈಯುಕ್ತಿಕ ಸಾಧನೆಗಾಗಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಅನೇಕ ಸಂ&ಸಂಸ್ಥೆಗಳು ಸನ್ಮಾನಿಸಿವೆ.

ರಾಜ್ಯೋತ್ಸವ ಪ್ರಶಸ್ತಿ

ಕ್ರೀಡೆ ಮತ್ತು ಕೌಶಲ ವಿಭಾಗಗಳಲ್ಲಿ ಕೋಲಾರ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯಮಟ್ಟದಲ್ಲಿ ಪಸರಿಸಿದ ನಾಗೇಶ್​ ಸಾಧನೆ ಗುರುತಿಸಿ ಕೋಲಾರ ಜಿಲ್ಲಾಡಾಳಿತ 2024ರಲ್ಲಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.