ಜಿಲ್ಲೆ

‘ಪ್ರತಿಭೆ’ಯನ್ನು ಗುರುತಿಸಬೇಕು: ಸಾಹಿತಿ ಟಿ. ಸತೀಶ್ ಜವರೇಗೌಡ

ಆರ್.ಕೃಷ್ಣ

ಮೈಸೂರು: ಶಿಕ್ಷಕರು ಮತ್ತು ಪಾಲಕರು ಮಕ್ಕಳಲ್ಲಿ ‘ಜ್ಞಾನ’ವನ್ನಷ್ಟೇ ವೃದ್ಧಿಸಿದರೆ ಸಾಲದು. ಅವರ ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ‘ಪ್ರತಿಭೆ’ಯನ್ನು ಗುರುತಿಸಬೇಕು. ಆಗ ಮಕ್ಕಳ ಸರ್ವತೋಮುಖ ವಿಕಾಸವಾಗುತ್ತದೆ ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.
ನಗರದ ಹೂಟಗಹಳ್ಳಿಯ ಕೆ.ಎಚ್.ಬಿ. ಕಾಲನಿಯಲ್ಲಿನ ಶ್ರೀರಾಮಕೃಷ್ಣ ವಿದ್ಯಾಕುಲ ಶಾಲೆಯಿಂದ ಕಲಾಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಅಭ್ಯುದಯ’ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಜ್ಞಾನ ಮತ್ತು ಪ್ರತಿಭೆ ಎರಡೂ ಇದ್ದರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸದ ಬಗ್ಗೆ ಶಿಕ್ಷಕರಷ್ಟೇ ಗಮನ ವಹಿಸಿದರೆ ಸಾಲದು. ಪಾಲಕರು ಕೂಡ ಅಪಾರ ಕಾಳಜಿ ವಹಿಸಬೇಕು. ತಮ್ಮ ನಿತ್ಯದ ಜಂಜಾಟಗಳ ನಡುವೆ ಮಕ್ಕಳ ಚಲನವಲನಗಳ ಸೂಕ್ಷ್ಮವಾಗಿ ಗಮನಿಸುತ್ತಾ, ದಾರಿ ತಪ್ಪದಂತೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಎಸ್‌ಜೆಸಿಇ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿ ಹುಸ್ಕೂರು ಅಂಬಿಕಾ ಶಿವನಂಜಪ್ಪ ಮಾತನಾಡಿ, ಒಂದು ವಿದ್ಯಾಸಂಸ್ಥೆ ದೇವಾಲಯವಿದ್ದಂತೆ. ದೇಶದ ಮುಂದಿನ ಭವಿಷ್ಯದ ನಾಯಕರನ್ನು ಹುಟ್ಟು ಹಾಕುವ ಮಹಾಬೆಳಕಿನ ಕ್ಷೇತ್ರ ಎಂದರು.
ಮಕ್ಕಳನ್ನು ಮೌಲ್ಯಯುತ ಪ್ರಜೆಗಳಾಗಿ ಸಜ್ಜುಗೊಳಿಸಿ ದೇಶದ ಬಡತನ, ಜಾತೀಯತೆ ಇತ್ಯಾದಿ ಅನಿಷ್ಟ ಪದ್ಧತಿಗಳನ್ನು ಅಳಿಸಿ, ಸಮಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕು. ಮಕ್ಕಳನ್ನು ಅಂಕಪಟ್ಟಿಗೆ ಸೀಮಿತಗೊಳಿಸದೆ ನಾಡು, ನುಡಿಯ ಬಗ್ಗೆ ಅಭಿಮಾನ, ನೆರೆಹೊರೆಯವರ ಜತೆಗೆ ಬಾಂಧವ್ಯದಿಂದಿರುವಂತೆ ಬೆಳೆಸಬೇಕು ಎಂದರು.
ಛಾಯಾದೇವಿ ಬಿ.ಇಡಿ. ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ. ಅಂಥೋನಿ ಪೌಲ್ ರಾಜ್ ಅವರನ್ನು ಸನ್ಮಾನಿಸಲಾಯಿತು. ಶ್ರೀರಾಮಕೃಷ್ಣ ವಿದ್ಯಾಕುಲ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಎಂ. ಯಶಸ್, ಕಾರ್ಯದರ್ಶಿ ಎಸ್.ಬಿ ಪುಷ್ಪಾ ಮಂಜುನಾಥ್, ಸದಸ್ಯ ಬಾಲೇಗೌಡ, ಸುಬ್ಬರಾಜು, ಎಸ್. ಬಿ. ಉಷಾರಾಣಿ, ನಿರ್ಮಲಾ, ಮುಖ್ಯಶಿಕ್ಷಕ ಎನ್.ಎಂ. ಸುನೀಲ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.