ಜಿಲ್ಲೆ

ಪ್ರತಿಭೆ ಶ್ರೀಮಂತರ ಸ್ವತ್ತಲ್ಲ

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಭೆಗೆ ಬಡವ, ಗ್ರಾಮೀಣ ಪ್ರದೇಶವೆಂಬ ಬೇಧ ಭಾವವಿಲ್ಲ. ಪ್ರತಿಭೆ ಎನ್ನುವುದು ಶ್ರೀಮಂತರ ಸ್ವತ್ತಲ್ಲ ಎಂಬುದನ್ನು ನೀವೆಲ್ಲ ಸಾಬೀತು ಮಾಡಿದ್ದೀರಿ ಎಂದು ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದರ್ಶಿ ಜಿ.ಸಿ.ತಲ್ಲೂರ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ವತಿಯಿಂದ ಹಂಚಿನಮನಿ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವಿವೇಕ ಸ್ಕಾಲರ್​ ಪ್ರೋಗ್ರಾಂ ಯೋಜನೆ ಅಡಿ ಪಿಯುಸಿ ಕಲಿತು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಸಾಗರವಿದ್ದಂತೆ, ಮಕ್ಕಳು ಧೃತಿಗೆಡದೆ ಈಜಿ ದಡ ಸೇರಬೇಕು. ಉನ್ನತ ಶಿಕ್ಷಣ ಪಡೆಯುವಾಗ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದೇವೆ ಎಂಬ ಕೀಳರಿಮೆ ಬೇಡ. ಇಂಗ್ಲಿಷ್​ ಮಾಧ್ಯಮಕ್ಕೆ ನಮ್ಮನ್ನು ನಾವು ಅಣಿಗೊಳಿಸಿಕೊಂಡು ಶಿಕ್ಷಣ ಮುಂದುವರೆಸಬೇಕು. ನಂತರ ಉದ್ಯೋಗಕ್ಕೆ ಸೇರಿದ ಬಳಿಕ ಬಡ ಮಕ್ಕಳಿಗೆ ದಾರಿದೀಪವಾಗಿ ಅವರ ಶಿಕ್ಷಣಕ್ಕೂ ಸಹಾಯ ಮಾಡಬೇಕು ಎಂದರು.
ಮಹೇಶ ಮಾಶಾಳ ಮಾತನಾಡಿ, ಜೀವನದಲ್ಲಿ ಏಳು-ಬೀಳು, ಸೋಲು-ಗೆಲುವು ಸಹಜ. ಶೈಕ್ಷಣಿಕ, ಆರ್ಥಿಕ ಬೆಂಬಲ ದೊರೆತಾಗ ಉಳಿದೆಲ್ಲವನ್ನೂ ಗಳಿಸಿಕೊಂಡು ಸಾಧನೆ ಮಾಡಬೇಕು. ಮಕ್ಕಳಿಗೆ ಶಿಕ್ಷಕರು, ಪಾಲಕರು ಪ್ರೀತಿ ತೋರಿಸಿದರೆ ಸಾಧನೆ ಮಾಡುತ್ತಾರೆ ಎಂದರು.
ಪಿ.ಆರ್​. ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಉನ್ನತ ಶಿಣಕ್ಕಾಗಿ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆದ 40 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸ್ವಾಮಿ ವಿವೇಕಾನಂದ ಯೂತ್​ ಮೂವ್​ ಮೆಂಟ್​ ನಿರ್ವಹಣಾ ಸಮಿತಿ ಸದಸ್ಯರಾದ ಡಾ.ಎಸ್​.ಎನ್​ ಹೆಗಡೆ, ಡಾ. ಗೋಪಾಲಕೃಷ್ಣ ಕಮಲಾಪುರ, ಹರ್ಷವರ್ಧನ ಶೀಲವಂತ, ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ.ಎಸ್​, ಶಾಂತೇಶ ಎಜುಕೇಷನ್​ ಸೊಸೈಟಿ ಸಹ ಕಾರ್ಯದರ್ಶಿ ವರ್ಷಾ ಹಂಚಿನಮನಿ, ಯಶವಂತ, ಇತರರು ಇದ್ದರು.
ದೀತಾ ಕಟಗಿ ಸ್ವಾಗತಿಸಿದರು. ಡಾ.ಪುಷ್ಪಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಷಿರಾ ಬಂಗಿ ನಿರೂಪಿಸಿದರು. ರಾಜು ಕಡೇಮನಿ ವಂದಿಸಿದರು.