ನಾಪೋಕ್ಲು: ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಉತ್ತಮ ವೇದಿಕೆ ಎಂದು ಎಂಎಲ್ಸಿ ಎಂ.ಪಿ ಸುಜಾ ಕುಶಾಲಪ್ಪ ಹೇಳಿದರು.
ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಡಿಕೇರಿ ತಾಲೂಕು ಮಟ್ಟದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಕಲೆ, ಸಾಹಿತ್ಯದಲ್ಲಿ ಭಾಗವಹಿಸುವುದರ ಮೂಲಕ ಪ್ರತಿಭೆಯನ್ನು ಓರೆಗೆ ಹಚ್ಚಬೇಕು. ಪ್ರತಿಭೆ ಹೊರ ತರಲು ಪಾಲಕರು ಪ್ರಯತ್ನಿಸಬೇಕು. ಮಕ್ಕಳ ಆಸಕ್ತಿ ಗುರುತಿಸಿ ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದರು.
ಶ್ರೀರಾಮ ಟ್ರಸ್ಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹರಿ ಮಂದಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಪೂಣಚ್ಚ ಮಾತನಾಡಿದರು. ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ ಬಿ.ಸಿ. ದೊಡ್ಡೇಗೌಡ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಪಿ.ಗುರುರಾಜ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಬಿ.ಎಂ. ಶಾರದಾ, ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ನಿರ್ದೇಶಕ ಮುತ್ತಣ್ಣ, ಬಿದ್ದಾಟಂಡ ಮುದ್ದಯ್ಯ, ಅಪ್ಪಾರಂಡ ಅಪ್ಪಯ್ಯ, ಬಿಆರ್‌ಪಿ ಮಂಜುಳಾ ಚಿತ್ರಾಪುರ ಹಾಗೂ ಶಿಕ್ಷಣ ಇಲಾಖೆಯ ವಿವಿಧ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.