ವಿಜಯವಾಣಿ ಸುದ್ದಿಜಾಲು ಉಡುಪಿ
ಅಂತಾರಾಷ್ಟ್ರೀಯ ಸಹಕಾರ ವರ್ಷದ ನಿಮಿತ್ತ ಏಕ್ ಪೇಡ್ ಮಾ ಕೆ ನಾಮ್ ಧ್ಯೇಯ ವಾಕ್ಯದಡಿ ಉಡುಪಿ ಜಿಲ್ಲೆಯಲ್ಲಿ ಗಿಡ ನೆಡುವ ಸಂಕಲ್ಪ ಮಾಡಲಾಗಿದೆ. ಸಹಕಾರ ಇಲಾಖೆ ವತಿಯಿಂದ ವಿದ್ಯಾರ್ಥಿ, ಸಂಘ-ಸಂಸ್ಥೆಗಳ ಮೂಲಕ ಮನೆಗೊಂದು ಗಿಡ ಯೋಜನೆಯಡಿ ಒಂದು ಲಕ್ಷ ಗಿಡ ನೆಡಲಾಗುತ್ತಿದ್ದು, ಉತ್ತಮವಾಗಿ ಪೋಷಿಸಿ, ಬೆಳೆಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು ಎಂದು ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಘೋಷಿಸಿದರು.
ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಜುಲೈ 5ರಂದು ಬೆಳಗ್ಗೆ ಆಯೋಜಿಸಿದ್ದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್, ಶೈಕ್ಷಣಿಕ ಪರಿಕರಗಳ ವಿತರಣೆ, ಪ್ರತಿಭಾ ಪುರಸ್ಕಾರ, ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿ ತಹಸೀಲ್ದಾರ್ ಪಿ.ಗುರುರಾಜ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯಾ ಕೆ.ಆರ್. ಮಾತನಾಡಿದರು.
ಉಡುಪಿ ನಗರಸಭಾ ಪರಿಸರ ಅಭಿಯಂತ ರವಿ ಪ್ರಕಾಶ್, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ ಸಿಇಒ ಅನೂಷಾ ಕೋಟ್ಯಾನ್, ಸೊಸೈಟಿ ನಿರ್ದೇಶಕರಾದ ಪುರುಷೋತ್ತಮ ಶೆಟ್ಟಿ, ಜಯ ಶೆಟ್ಟಿ, ಸದಾಶಿವ ನಾಯಕ, ಎಲ್.ಉಮಾನಾಥ, ವಿನಯಕುಮಾರ್, ಅಬ್ದುಲ್ ರಜಾಕ್, ಜಾರ್ಜ್ ಸ್ಯಾಮ್ಯುಯೆಲ್ ಉಪಸ್ಥಿತರಿದ್ದರು.
ಸದಾನಂದ ಎಸ್. ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕ ನವೀನ ಕೆ. ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಾಜೇಶ ವಿ. ಶೇರಿಗಾರ್ ವಂದಿಸಿದರು.
ಎಲ್ಲ ಮಕ್ಕಳಲ್ಲೂ ಪ್ರತಿಭೆ ಇರುತ್ತದೆ. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಸಾಧನೆಯ ಕುರಿತಾಗಿ ಸಣ್ಣದಲ್ಲ, ದೊಡ್ಡ ಕನಸನ್ನೇ ಕಾಣಬೇಕು. ಸಾಧಕರ ಮಾರ್ಗ ಅವಲೋಕಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. | ರಾಜೇಂದ್ರ ಭಟ್ ಕೆ. ಬೆಳ್ಮಣ್ಣು. ತರಬೇತುದಾರ