ಮಂಡ್ಯ: ಕುಂಬಾರ ಸಮುದಾಯದ ಸ್ಥಿತಿಗತಿಗಳ ಅಧ್ಯನಕ್ಕಾಗಿ ಸರ್ಕಾರದಿಂದ ಆರಂಭಗೊಂಡಿರುವ ಕುಲಶಾಸ್ತ್ರ ಅಧ್ಯಯನಕ್ಕೆ ಸಮರ್ಪಕವಾದ ಮಾಹಿತಿ ನೀಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಸಲಹೆ ನೀಡಿದರು.
ನಗರದ ಗಾಂಧಿಭವನದಲ್ಲಿ ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್, ಕುಂಬಾರ ಜಾಗೃತಿ ವೇದಿಕೆಯಿಂದ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನದಲ್ಲಿ ಕುಂಬಾರ ಜನಾಂಗದ ಕುಲವೃತ್ತಿಗಳು ವಿನಾಶದ ಅಂಚಿನಲ್ಲಿದೆ. ಈ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಹಾಗೂ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯನ ಮಾಡಲು ಹಂಪಿ ವಿಶ್ವವಿದ್ಯಾನಿಲಯದ ತಂಡ, ಕುಲಶಾಸ ಅಧ್ಯಯನವನ್ನು ನಡೆಸುತ್ತಿದ್ದು, ಆನ್‌ಲೈನ್ ಮೂಲಕವು ಮಾಹಿತಿಯನ್ನು ಒದಗಿಸಲು ಅವಕಾಶವಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸುವುದರ ಜತೆಗೆ ಭವಿಷ್ಯದ ಶಿಕ್ಷಣ ಮತ್ತು ಮುಂದಿನ ಜೀವನದ ವಿಧಾನಗಳ ಬಗ್ಗೆ ಅರಿವು ಮೂಡಿಸುವ ಅತ್ಯಗತ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ, ಉನ್ನತ ಸ್ಥಾನಕ್ಕೆ ಏರಿದ ನಂತರ ತಮ್ಮ ಸಮುದಾಯದ ಋಣವನ್ನು ತೀರಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕಿ ಮಮತಾ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿಯೇ ಶಿಕ್ಷಣದ ಮೌಲ್ಯ ಅರಿತುಕೊಳ್ಳುವುದು ಮುಖ್ಯವಾಗಬೇಕು. ಆ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಬೇಕು. ಮಾತ್ರವಲ್ಲದೆ ಭವಿಷ್ಯದ ಸ್ಪಷ್ಟತೆ ಇರಬೇಕು. ಪರಿಶ್ರಮದ ಅಧ್ಯಯನದ ಮೂಲಕ ಎಲ್ಲವನ್ನೂ ಪಡೆದುಕೊಳ್ಳುವ ಅವಕಾಶವಿದ್ದು, ಆ ದಾರಿಯಲ್ಲೇ ಸಾಗಬೇಕು ಎಂದು ತಿಳಿಸಿದರು.
ಮಡಿಕೇರಿ ಗ್ರಾಹಕರ ಆಯೋಗದ ಸದಸ್ಯೆ ರೇಣುಕಾಂಬ, ಮೈಸೂರಿನ ಕ್ರೆಡಿಟ್ ಐ ಸಂಸ್ಥೆಯ ಸಂಸ್ಥಾಪಕ ಡಾ.ಎಂ.ಪಿ.ವರ್ಷ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಮೈಸೂರು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಕೆ.ಎಂ.ನಾಗರಾಜು, ಜಿಲ್ಲಾ ಕುಂಬಾರರ ಜಾಗೃತಿ ಅಧ್ಯಕ್ಷ ಎಂ.ಕೃಷ್ಣ, ಶ್ರೀರಂಗಪಟ್ಟಣ್ಣ ಅಬಕಾರಿ ನಿರೀಕ್ಷಕ ಶಿವಣ್ಣ, ಬೆಂಗಳೂರು ಕುಂಬಾರ ಸಂಘಧ ಲೆಕ್ಕಪರೀಶೋಧಕ ಸಿ.ಎಂ.ಸೋಮಸುಂದರ್ ಮಾತನಾಡಿದರು.
ಅಧ್ಯಕ್ಷತೆಯನ್ನು ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಆರ್.ಶ್ರೀನಿವಾಸ್ ವಹಿಸಿದ್ದರು. ಜಾಗೃತಿ ವೇದಿಕೆಯ ಪದಾಧಿಕಾರಿಗಳಾದ ಪುರ ಕಾಂತರಾಜು, ಕೆರಗೋಡು ವೆಂಕಟೇಶ್, ಯಲಿಯೂರು ಪ್ರದೀಪ್, ದಾಸಪ್ಪ, ಆನಂದ್, ಸಿದ್ದರಾಜು, ಬಸವರಾಜು ಇತರರಿದ್ದರು.