ಜಿಲ್ಲೆ

ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿ ಶಿಕ್ಷಣ...

ಶಾಸಕ ಯಶ್​ಪಾಲ್​ ಸುವರ್ಣ ಆಶಯ

ಉಡುಪಿ ಸರ್ಕಾರಿ ಕಾಲೇಜ್​ನಲ್ಲಿ ಪ್ರತಿಭಾ ಪುರಸ್ಕಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ಪಂಚಮುಖಿ ವ್ಯಕ್ತಿತ್ವದ ಮೂಲಕ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶಿಕ್ಷಣ ಪೂರಕವಾಗಬೇಕು. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೊಂದಿಗೆ ಶಿಕ್ಷಕರು ಕ್ರಿಯಾಶೀಲವಾಗಿ ಹಾಗೂ ವಿದ್ಯಾರ್ಥಿಸ್ನೇಹಿಯಾಗಿ ಕೆಲಸ ಮಾಡಬೇಕು. ಅದರಿಂದ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್​ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್​ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಧಕರಿಗೆ ಅಭಿನಂದನೆ ಸಲ್ಲಿಸಿದರು.

2024-25 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ, ರೋವರ್​ ರೇಂಜರ್ಸ್​, ಎನ್​ಎಸ್​ಎಸ್​, ಎನ್​ಸಿಸಿಯಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಕಾಶ ಎನ್​. ಆಚಾರ ಅವರ ನಿಗದಿತ ಮೊತ್ತದಿಂದ ಹಾಗೂ ಪ್ರೇಮಾ ಎನ್​. ವೈದ್ಯ ದತ್ತಿನಿಧಿಯ ಬಡ್ಡಿಯಿಂದ ಬರುವ 1.55 ಲಕ್ಷ ರೂ. ಸ್ಕಾಲರ್ಷಿಪ್​ ವಿತರಿಸಿ, ಗೌರವಿಸಲಾಯಿತು.

ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯ ಟಿ.ಜಿ. ಹೆಗಡೆ, ಎಸ್​ಡಿಎಂಸಿ ಉಪಾಧ್ಯಕ್ಷ ವಿಠ್ಠಲ ಶೆಟ್ಟಿ, ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ನಗರಸಭಾ ಮಾಜಿ ಸದಸ್ಯ ರವಿ ಅಮೀನ್​, ಪೋಷಕರ ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಸ್ಟೀಫನ್​ ಮಸ್ಕರೇನಸ್​ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲೆ ಲೀಲಾಬಾಯಿ ಭಟ್​ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.