ಕೆ.ಎಂ.ದೊಡ್ಡಿಯ ಜೈ ಭೀಮ್ ದಲಿತ ಜಾಗೃತಿ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಲಿತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಸಕ ಕದಲೂರು ಉದಯ್ ಅಭಿನಂದಿಸಿದರು. 
ಜಿಲ್ಲೆ

ದ್ವೇಷ, ಅಸೂಯೆಗೆ ಕಡಿವಾಣ ಹಾಕಲು ಬುದ್ಧ ಮಂತ್ರ ಜಪಿಸಿ

ನಾಗೇಶ ಎಸ್

ಕೆ.ಎಂ.ದೊಡ್ಡಿ: ವ್ಯಕ್ತಿತ್ವ ವಿಕಸನಕ್ಕೆ ಬುದ್ದನ ಪಂಚಶೀಲ ತತ್ವಗಳು ಪೂರಕವಾಗಿವೆ ಎಂದು ಶಾಸಕ ಕದಲೂರು ಉದಯ್ ಹೇಳಿದರು.

ಪಟ್ಟಣದಲ್ಲಿ ಜೈ ಭೀಮ್ ದಲಿತ ಜಾಗೃತಿ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ದಲಿತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುಳ್ಳು, ಮೋಸ, ಕಳ್ಳತನ, ವ್ಯಭಿಚಾರ, ಮದ್ಯಪಾನ, ಪ್ರಾಣಹತ್ಯೆ ಹೀಗೆ ಮನಸ್ಸಿಗೆ ಹಾನಿ ಉಂಟುಮಾಡುವ ಚಟುವಟಿಕೆಗಳಿಂದ ಮನುಷ್ಯ ಜರ್ಜರಿತನಾಗುತ್ತಾನೆ. ದ್ವೇಷ, ಅಸೂಯೆಗಳು ತುಂಬಿ ಪ್ರಲೋಬನೆಗೊಳಗಾಗುತ್ತಾನೆ. ಇದಕ್ಕೆ ಕಡಿವಾಣ ಹಾಕಲು ಬುದ್ಧ ಮಂತ್ರ ಜಪಿಸಿ ಎಂದು ಕರೆ ನೀಡಿದರು.

ಮನುಷ್ಯ ತನ್ನ ಅಸೂಯೆಯಿಂದ ತನಗೂ ಹಾನಿಮಾಡಿಕೊಂಡು, ತನ್ನ ಸುತ್ತಲಿನ ಪರಿಸರಕ್ಕೂ ಹಾನಿ ಉಂಟು ಮಾಡುತ್ತಾನೆ. ಹಾಗಾಗಿ ಬುದ್ದನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಕಳೆದ 22 ವರ್ಷಗಳಿಂದ ಜೈ ಭೀಮ್ ದಲಿತ ಜಾಗೃತಿ ಸಮಿತಿ ಕಟ್ಟಿಕೊಂಡು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಚಿಕ್ಕರಸಿನಕೆರೆ ಶಿವಲಿಂಗಯ್ಯ ಅವರ ಕಾರ್ಯ ಮೆಚ್ಚಬೇಕು. ಇಂತಹ ಸಮಾಜಮುಖಿ ಕೆಲಸಗಳು ನಿರಂತರವಾಗಿ ನಡೆಯಲಿ. ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಭರವಸೆ ನೀಡಿದರು.

ಜೈ ಭೀಮ್ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಮಾತನಾಡಿ, ಸಮಿತಿ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಿದ್ದೇವೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬುದು ನಮ್ಮ ಸಮಿತಿಯ ಧ್ಯೇಯ. ಮನುಷ್ಯ ಹುಟ್ಟುತ್ತಾನೆ, ಸಾಯುತ್ತಾನೆ. ಈ ಮಧ್ಯೆ ಏನಾದರೂ ಸಾಧಿಸಿ ಹೋಗಬೇಕೆಂಬುದು ನಮ್ಮ ಆಶಯ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಸಿ.ಎ.ಪ್ರಶಾಂತ್, ಕೆ.ಎಂ.ಯಶವಂತ್‌ಕುಮಾರ್, ಎಸ್.ಮಧುರಾ ಅವರನ್ನು ಅಭಿನಂದಿಸಲಾಯಿತು. ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಪದಾಧಿಕಾರಿಗಳಾದ ಅಣ್ಣೂರು ಮಹದೇವಯ್ಯ, ವಸಂತಾ ವೆಂಕಟಾಚಲಯ್ಯ, ಜಾಣಪ್ಪ, ಅಂಬರಹಳ್ಳಿ ಸ್ವಾಮಿ, ಮುಡೀನಹಳ್ಳಿ ತಿಮ್ಮಯ್ಯ, ಕೆ.ಶೆಟ್ಟಹಳ್ಳಿ ನಾಗರಾಜು, ಮಾಲಯ್ಯ, ರಾಮಣ್ಣ, ದೇವರಾಜು, ಟೈಲರ್ ಶಿವಕುಮಾರ್ ಇದ್ದರು.