ಮಂಡ್ಯ: ಅನಾದಿ ಕಾಲದಿಂದಲೂ ಚೆಸ್ ಪ್ರಮುಖ ಆಟವಾಗಿದೆ. ಇದು ರಾಮಾಯಣ ಮಹಾಭಾರತದಲ್ಲೂ ಚಾಲ್ತಿಯಲ್ಲಿತ್ತು ಎಂದು ಅಬಕಾರಿ ಇಲಾಖೆ ಮೈಸೂರು ವಿಭಾಗದ ಡಿವೈಎಸ್‌ಪಿ ಕೆ.ಮೋಹನ್ ಹೇಳಿದರು.
ನಗರದ ಗಾಂಧಿಭವನದಲ್ಲಿ ದಿ.ವಿಝರ್ಡ್ ಗುರು ಟ್ರಸ್ಟ್, ಮಂಡ್ಯ ರಾಯಲ್ ಚೆಸ್ ಅಕಾಡೆಮಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ಚೆಸ್ ಆಟ ಉತ್ತಮ ಬೆಳೆವಣಿಗೆ ಕಂಡಿದೆ. ಚೆಸ್ ಆಟದಲ್ಲಿ ಭಾರತ ಕೂಡ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ ಕೀರ್ತಿಯನ್ನು ಆಟಗಾರರು ತಂದಿದ್ದಾರೆ. ಆನ್‌ಲೈನ್ ಮೂಲಕವೂ ಪಂದ್ಯ ನಡೆಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಸಂಪಾದಿಸಿದ ಸಂಸ್ಥೆಯಾಗಿ ಮಂಡ್ಯ ರಾಯಲ್ ಚೆಸ್ ಅಕಾಡೆಮಿ ಬೆಳೆದಿದೆ. ಇದು ನಮ್ಮ ಸ್ವಂತ ಅನುಭವಕ್ಕೂ ಬಂದಿದೆ ಎಂದು ಸ್ಮರಿಸಿದರು.
ಇನ್ನು ನಾವು ಅಬಕಾರಿ ಇಲಾಖೆ ವಿಷಯಗಳನ್ನು ಅರಿಯೋಣ. ಇಂದಿನ ದಿನಗಳಲ್ಲಿ ದೊಡ್ಡ ದೊಡ್ಡ ನಗರ ಪ್ರದೇಶಗಳ ಕಾಲೇಜು ಯುವಕರಿಗೆ ಮಾದಕ ದ್ರವ್ಯಗಳಾದ ಡ್ರಗ್ಸ್ ಲಭಿಸುತ್ತಿದೆ. ಆದ್ದರಿಂದ ಪಾಲಕರು ತಮ್ಮ ಯುವ ವಯಸ್ಸಿನ ಮಕ್ಕಳ ಚಲನವಲನಗಳನ್ನು ಗಮನಿಸಿ. ಯುವಕರು ಡ್ರಗ್ಸ್‌ಗೆ ವ್ಯಸನಿಯಾದರೆ ಮತ್ತೆ ಸರಿಪಡಿಸುವುದು ಸಾಧ್ಯತೆ ಕಡಿಮೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಅಗತ್ಯ. ಸೂಕ್ಷ್ಮ ಮನಸ್ಸಿನ ಯುವಕರೇ ಇಂತಹ ಕೆಟ್ಟ ಚಟಗಳಿಗೆ ಹೆಚ್ಚಾಗಿ ದಾಸರಾಗುತ್ತಾರೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ಎಂ.ಎಸ್.ಚೇತನ್, ಮಹಾರಾಣಿ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಸಿ.ಎಸ್.ಮೋಹನ್‌ಕುಮಾರ್, ಮೈಸೂರಿನ ಕೆ.ಆರ್.ವಿ.ವಿ.ವಿ ರಾಜ್ಯಾಧ್ಯಕ್ಷೆ ಎಚ್.ಎಲ್.ಯಮುನಾ, ಕಾರ್ಮಲ್ ಕಾನ್ವೆಂಟ್ ವ್ಯವಸ್ಥಾಪಕಿ ಸಿಸ್ಟರ್ ಗ್ಲಾಡೀಸ್, ಪ್ರಾಂಶುಪಾಲೆ ಸಿಸ್ಟರ್ ಲಲಿತಾ ಮೇರಿ ಇತರರಿದ್ದರು.