ಜಿಲ್ಲೆ

ಕಟೀಲು ವಿದ್ಯಾಸಂಸ್ಥೆಯಿಂದ ಬದುಕುವ ಶಿಕ್ಷಣ :ಶಾಸಕ ಉಮಾನಾಥ ಕೋಟ್ಯಾನ್ ಶ್ಲಾಘನೆ

ಸೌಮ್ಯ ಆರ್

ಕಿನ್ನಿಗೋಳಿ: ಅತಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಕಟೀಲು ವಿದ್ಯಾಸಂಸ್ಥೆ ನೀಡುತಿರುವುದು ಅಭಿನಂದನೀಯ, ಪಾಠವಲ್ಲದೆ ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸಿಕೊಂಡು ಬದುಕುವ ಶಿಕ್ಷಣ ಕೊಡುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಶ್ರೀ ದುರ್ಗಾಪರಮೇಶ್ವರೀ ಪಪೂ ಕಾಲೇಜು ಕಟೀಲು ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಟೀಲು ದೇವಳ ಆಡಳಿತ ಮೊಕ್ತೇಸರ ವಾಸುದೇವ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 8ನೇ ರ‌್ಯಾಂಕ್ ಪಡೆದ ಆತ್ಮೀಯ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದವರನ್ನು, ರಾಜ್ಯಮಟ್ಟದಲ್ಲಿ ಬಹುಮಾನ ಪಡೆದವರನ್ನು ಸನ್ಮಾನಿಸಲಾಯಿತು. ರಾಜ್ಯ, ರಾಷ್ಟಮಟ್ಟದ ಕ್ರೀಡಾ, ಯೋಗ ಮತ್ತಿತರ ಚಟುವಟಿಕೆಗಳಲ್ಲಿ ಸಾಧನೆಗೈದ ಸಾಧಕರಿಗೆ ಶಾಲಾ ಪ್ರವೇಶ ಶುಲ್ಕವನ್ನು ಸಾಧಕರ ನೆಲೆಯಲ್ಲಿ ವಿದ್ಯಾರ್ಥಿವೇತನದ ಮೂಲಕ ಹಿಂದುರಿಗಿಸಲಾಯಿತು.

ದೇವಳದ ಪ್ರಧಾನ ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ, ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಲೋಕಯ್ಯ ಸಾಲಿಯಾನ್ ಕೊಂಡೇಲ, ಶಿಕ್ಷಕ ರಕ್ಷಕ ಸಂಘ ಉಪಾಧ್ಯಕ್ಷ ಜಯರಾಮ ಅಮೀನ್, ಪ್ರಾಂಶುಪಾಲೆ ಕುಸುಮಾವತಿ, ವಿದ್ಯಾರ್ಥಿ ಸಂಘ ನಾಯಕ ಶಿವಮಾನ್ಯ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಪರಮೇಶ್ವರ್ ಸ್ವಾಗತಿಸಿ. ಡಾ.ಸುದೀರ್ ನಾಯಕ್ ವಂದಿಸಿ, ಶೈಲಜಾ ನಿರೂಪಿಸಿದರು.