ಜಿಲ್ಲೆ

ತಳವಾರ-ಪರಿವಾರ ಎಸ್ಟಿ ಮೀಸಲು ಮುಗಿಯದ ಗೋಜಲು

ರಮೇಶ್​ ಕುಮಾರ್​​ ಬಿ ಎಡಮೋಳೆ

| ಪರಶುರಾಮ ಭಾಸಗಿ ವಿಜಯಪುರ

ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ತಳವಾರ ಮತ್ತು ಪರಿವಾರ ಸಮುದಾಯದ ಎಸ್​ಟಿ ಮೀಸಲು ವಿಷಯ ಸಂಬಂಧ ಅಧಿಕಾರಿ ವರ್ಗ ಮತ್ತಷ್ಟು ಗೊಂದಲ ಸೃಷ್ಟಿಸುತ್ತಲೇ ಇದೆ.

ಆ. 31ರಂದು ಸಮಾಜ ಕಲ್ಯಾಣ ಇಲಾಖೆ ಹೊಸದಾಗಿ ಹೊರಡಿಸಿದ ಸುತ್ತೋಲೆ ಸಹ ಗೊಂದಲದ ಗೂಡಾಗಿದೆ. ಜೂ. 6ರಂದು ಹೊರಡಿಸಿದ ಸುತ್ತೋಲೆಯಲ್ಲಿ ಸಾಕಷ್ಟು ಗೊಂದಲ ಇದ್ದ ಕಾರಣ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ತಡೆ ಹಿಡಿಯಲಾಗಿತ್ತು. ಇದೀಗ ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಹೊಸದಾಗಿ ಸುತ್ತೋಲೆ ಹೊರಡಿಸಿದ್ದು, ಅದರಲ್ಲೂ ಗೊಂದಲವೇ ಮುಂದುವರಿದಿದೆ.

ಏನಿದು ಗೊಂದಲ?: ಕೇಂದ್ರ ಸರ್ಕಾರ 2020ರ ಮಾ.19ರಂದು ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ರಾಜ್ಯಪತ್ರ ಹೊರಡಿಸಿದೆ. ಈ ಎರಡೂ ಸಮುದಾಯ ನಾಯಕ ಮತ್ತು ನಾಯಕಡ ಸಮುದಾಯದ ಪರ್ಯಾಯ ಪದಗಳೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿ ನಾಯಕ ಮತ್ತು ನಾಯಕಡ ಸಮುದಾಯದ ಪರ್ಯಾಯ ಪದಗಳು ತಳವಾರ ಮತ್ತು ಪರಿವಾರ ಎಂದಿದ್ದು, ‘ಅದೇ ಜಾತಿಗೆ ಸೇರಿದ ತಳವಾರ ಮತ್ತು ಪರಿವಾರ’ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡಬೇಕೆಂದಿದ್ದು ಸಾಕಷ್ಟು ಗೊಂದಲಕ್ಕೀಡಾಗಿತ್ತು. ‘ಅದೇ ಜಾತಿಯ ತಳವಾರ-ಪರಿವಾರ’ ಎಂದರೆ ಯಾರು? ಎಂಬುದೇ ಗೊಂದಲ. ಇದೀಗ ಹೊಸ ಸುತ್ತೋಲೆಯಲ್ಲೂ ‘ತಳವಾರ ಮತ್ತು ಪರಿವಾರ ಎಂಬುದು ಹಿಂದುಳಿದ ವರ್ಗದಲ್ಲೂ ಬರಲಿದ್ದು, ಅಂಥವರಿಗೆ ಎಸ್​ಟಿ ಜಾತಿ ಪ್ರಮಾಣಪತ್ರ ನೀಡುವಂತಿಲ್ಲ’ ಎಂದು ಉಲ್ಲೇಖಿಸಲಾಗಿದೆ. ಆದರೆ ಸದ್ಯ ತಳವಾರ-ಪರಿವಾರ ಇರುವುದೇ ಹಿಂದುಳಿದ ವರ್ಗದಲ್ಲಿ, ಸಮಸ್ಯೆ ಬಂದಿರುವುದೇ ಪರಿಶಿಷ್ಟ ವರ್ಗಕ್ಕೆ ಸೇರಿಸುವ ವಿಚಾರದಲ್ಲಿ. ಇಲ್ಲಿ ತಳವಾರ-ಪರಿವಾರದಲ್ಲಿ ಹಿಂದುಳಿದ ಮತ್ತು ನೈಜ ಪರಿಶಿಷ್ಟ ಎಂಬ ಪ್ರಮೇಯವೇ ಉದ್ಭವಿಸುವುದಿಲ್ಲ ಎಂಬುದು ಸಮುದಾಯದ ಮುಖಂಡ ಸಿದ್ದು ಕೋಳಿ ಅಭಿಮತ.

ತಳವಾರ-ಪರಿವಾರ ಸಮುದಾಯದಲ್ಲಿ ಯಾರು ಹಿಂದುಳಿದ ವರ್ಗಕ್ಕೆ ಸೇರಬೇಕು? ಯಾರು ಎಸ್​ಟಿಗೆ ಸೇರಬೇಕೆಂಬ ತೀರ್ಮಾನ ಹೇಗೆ? ಗಂಗಾಮತಕ್ಕೆ ಸೇರಿದ ಅಥವಾ ವಾಲ್ಮೀಕಿ ಸಮುದಾಯಕ್ಕೆ ಸೇರಿದ ತಳವಾರ ಎಂದು ಯಾವ ಆಧಾರದ ಮೇಲೆ ವಿಭಜಿಸುತ್ತೀರಿ? ಈಗಿರುವ ಸಮುದಾಯದ ಎಲ್ಲ ಶಾಲಾ ದಾಖಲಾತಿಗಳು ‘ಹಿಂದು-ತಳವಾರ’ ಎಂದಿದ್ದು ಅವರು ಎಸ್​ಟಿ ಇಲ್ಲವೇ ಹಿಂದುಳಿದ ವರ್ಗಕ್ಕೆ ಸೇರಿದವರೆಂದು ಹೇಗೆ ತೀರ್ವನಿಸುತ್ತೀರಿ? ಎಂಬುದಕ್ಕೆ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲ.

ಎರಡೂ ಒಂದೇ ಸಮುದಾಯ

ತಳವಾರ ಮತ್ತು ಪರಿವಾರ ಒಂದೇ ಸಮುದಾಯ. ಕೆಲ ರಾಜಕಾರಣಿಗಳು ವಾಲ್ಮೀಕಿ ತಳವಾರ, ಗಂಗಾಮತ ತಳವಾರ ಎಂದು ಪ್ರತ್ಯೇಕಿಸುವ ಹುನ್ನಾರ ನಡೆಸಿದ್ದಾರೆ. ಅಂಬಿಗರ ಚೌಡಯ್ಯ ನಿಗಮದಲ್ಲಾಗಲಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ಕೋಳಿ, ಅಂಬಿಗ, ಗಂಗಾಮತ, ಕಬ್ಬಲಿಗ ಸಮುದಾಯದ 32 ಪರ್ಯಾಯ ಪದಗಳ ಪಟ್ಟಿಯಲ್ಲೂ ತಳವಾರ ಪದ ಇಲ್ಲ. ಹಾಗಾದರೆ ತಳವಾರ- ಪರಿವಾರ ಸಮುದಾಯವನ್ನು ವಿಭಜಿಸುವ ಮಾನದಂಡ ಯಾವುದು? ತಳವಾರ-ಪರಿವಾರ ಸಮುದಾಯ ಈ ಹಿಂದೆಯೂ ಹಿಂದುಳಿದ ವರ್ಗದಲ್ಲೇ ಇತ್ತು. ಹೀಗಾಗಿ ಸುತ್ತೋಲೆಯಲ್ಲಿ ತಳವಾರ ಮತ್ತು ಪರಿವಾರ ಹಿಂದುಳಿದ ವರ್ಗದಲ್ಲೂ ಇದ್ದು, ಪರಿಶೀಲಿಸಿ ಪ್ರಮಾಣ ಪತ್ರ ನೀಡಬೇಕೆಂದು ಉಲ್ಲೇಖ ಅವೈಜ್ಞಾನಿಕ ಎನ್ನುತ್ತಾರೆ ಸಿದ್ದು ಕೋಳಿ.

ತಹಸೀಲ್ದಾರ್ ಹೆಗಲಿಗೆ ಜವಾಬ್ದಾರಿ

ಪರಿಶಿಷ್ಟ ಪಂಗಡಕ್ಕೆ ಸೇರಿದ ಪರಿವಾರ ಮತ್ತು ತಳವಾರ ಸಮುದಾಯದ ನೈಜ ವ್ಯಕ್ತಿಗಳಿಗೆ ತೊಂದರೆ ಉಂಟಾಗದಂತೆ ಕಾಲಮಿತಿಯೊಳಗೆ ಎಸ್ಟಿ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ತಹಸೀಲ್ದಾರರು ಎಸ್​ಟಿ ಪ್ರಮಾಣಪತ್ರ ನೀಡುವ ಪ್ರಾಧಿಕಾರವಾಗಿದ್ದು, ಈಗಾಗಲೇ ತಿಳಿಸಿದ ಕಾರ್ಯವಿಧಾನ ಪಾಲನೆ ಕಡ್ಡಾಯ. ಪ್ರಮಾಣಪತ್ರ ನೀಡುವ ಮುನ್ನ ಸಂಬಂಧಿಸಿದ ವ್ಯಕ್ತಿ ಎಸ್​ಟಿಗೆ ಸೇರಿದ್ದನ್ನು ಖಾತ್ರಿ ಪಡಿಸಿಕೊಳ್ಳುವುದು ಸಂಪೂರ್ಣವಾಗಿ ತಹಸೀಲ್ದಾರ್ ಜವಾಬ್ದಾರಿ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸರ್ಕಾರದ ಮಾನದಂಡ ಆಧರಿಸಿ ಜಾತಿ ಪ್ರಮಾಣಪತ್ರ ನೀಡಲಾಗುವುದು. ಈ ಹಿಂದೆ ಯಾರು ಯಾವ ವರ್ಗದಲ್ಲಿದ್ದರೋ ಅದೇ ವರ್ಗದಡಿ ಜಾತಿ ಪ್ರಮಾಣಪತ್ರ ಪಡೆಯಲಿದ್ದಾರೆ. ತಳವಾರ ಮತ್ತು ಪರಿವಾರ ಸಮುದಾಯದವರು ಈ ಮೊದಲು ಪಡೆದ ಪ್ರಮಾಣಪತ್ರವನ್ನೇ ಪಡೆಯಲಿದ್ದಾರೆ. | ಪಿ. ಸುನೀಲಕುಮಾರ ಜಿಲ್ಲಾಧಿಕಾರಿ