ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಏಳು ವರ್ಷಗಳಲ್ಲಿ ತಲಪಾಡಿಯ 14 ಗ್ರಾಮಸಭೆಗಳು ನಡೆದರೂ ಬಾರದಿದ್ದ ರಾ.ಹೆ. ಪ್ರಾಧಿಕಾರ ಮತ್ತು ಟೋಲ್‌ಗೇಟ್ ಅಧಿಕಾರಿಗಳು ಗುರುವಾರ ನಡೆದ ಗ್ರಾಮಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಗ್ರಾಮಸ್ಥರ ಆಕ್ರೋಶ ಸ್ಫೋಟಗೊಂಡು ವಾದ, ಪ್ರತಿವಾದಕ್ಕೆ ಕಾರಣವಾಗಿ ಎರಡು ತಾಸು ವ್ಯಯವಾಯಿತು.
ತಲಪಾಡಿ ಗ್ರಾ.ಪಂ.ನ ಸಭಾಭವನದಲ್ಲಿ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ನಡೆದಿದ್ದು, ರಾ.ಹೆ. ಮತ್ತು ಟೋಲ್‌ಗೇಟ್ ಅಧಿಕಾರಿಗಳನ್ನು ಕಂಡ ಗ್ರಾಮಸ್ಥರು, ಸ್ವಾಗತ, ನಡವಳಿಕೆ ಸಭೆಯ ಮುಂದಿಡಲು ಬಿಡದೆ ಆರಂಭದಲ್ಲೇ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಗ್ರಾಮಸ್ಥ ಖಲೀಲ್ ಮಾತನಾಡಿ, ಸರ್ವೀಸ್ ರಸ್ತೆ ಇಲ್ಲದ ಕಾರಣ ತಲಪಾಡಿಯಿಂದ ಕೋಟೆಕಾರ್‌ವರೆಗೆ ಪೆಟ್ರೋಲ್ ಬಂಕ್‌ಗೆ ಹೋಗಬೇಕಾದರೆ ವಿರುದ್ಧ ದಿಕ್ಕಿನಲ್ಲಿ ಹೋಗಬೇಕಾಗಿದೆ. ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳು ಆಧಾರ್ ಕಾರ್ಡ್ ತೋರಿಸಿದರೆ ಸಾಕೆಂದು ಕೇಂದ್ರ ಸಾರಿಗೆ ಸಚಿವರು ಹೇಳಿದ್ದು, ತಲಪಾಡಿಯಲ್ಲಿ ಬಳಿ ವಾಹನ ದಾಖಲೆ, ಆಧಾರ್ ಕಾರ್ಡ್, ಚಾಲನಾ ಪರವಾನಿಗೆ ಕೇಳುತ್ತಾರೆ, ಇದರ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಯಶು ಪಕ್ಕಳ, ಸಲಾಂ ಉಚ್ಚಿಲ್, ಖಾದರ್ ಮಕ್ಯಾರ್, ಸಿದ್ದೀಕ್ ತಲಪಾಡಿ ಸಹಿತ ಗ್ರಾಮಸ್ಥರು ಧ್ವನಿಗೂಡಿಸಿದರು.
ಟೋಲ್‌ಗೇಟ್ ಪಿಆರ್‌ಒ ಆನಂದ್ ಮಾತನಾಡಿ, ಆರ್.ಸಿ.ಕಡ್ಡಾಯ. ಆಧಾರ್ ಕಾರ್ಡ್ ತೋರಿಸಿದರೆ ಬಿಡಲು ಅಸಾಧ್ಯ. ಗ್ರಾಮದ 450 ಉಚಿತ ವಾಹನಗಳ ಸಂಖ್ಯೆಗಳನ್ನು ಪಂಚಾಯಿತಿಗೆ ನೀಡಿದ್ದು, ಸಹಿ ಹಾಕಿ ಕೊಟ್ಟರೆ ನಂತರ ಆರ್‌ಸಿ ಕೇಳುವುದಿಲ್ಲ ಎಂದರು.
ಎರಡನೇ ವಾರ್ಡ್ ಮಹಿಳೆಯೊಬ್ಬರು ನಾಲ್ಕು ಅರ್ಜಿ ಕೊಡಲಾಗಿದೆ. ಚರಂಡಿ ಅರ್ಧದಲ್ಲಿದೆ. ಏನಾದರೂ ಅನಾಹುತ ಆದರೆ ಯಾರು ಹೊಣೆಗಾರರು ಎಂದು ಆರೋಪಿಸಿದರು.
ಸದಸ್ಯ ಝಾಯಿದ್ ಮಾತನಾಡಿ, ಅದು ದೊಡ್ಡ ಚರಂಡಿ, ಆರು ಲಕ್ಷ ಬೇಕು. ಬಜೆಟ್‌ನಲ್ಲಿ 50 ಸಾವಿರ ಇರುವುದು, ಶಾಸಕರು ಅನುದಾನ ಕೊಡುವುದಿಲ್ಲ. ನಾವು ಚರಂಡಿ, ರಸ್ತೆ ಎಲ್ಲ ಮಾಡಿಕೊಡ್ತೇವೆ ಎಂದು ಭರವಸೆ ನೀಡಿದರು.
ಉಪಾಧ್ಯಕ್ಷೆ ಪುಷ್ಪಾವತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಇಲಾಖೆಯ ಶೈಲಾ ಕಾರಗಿ ನೋಡೆಲ್ ಅಧಿಕಾರಿಯಾಗಿದ್ದರು. ಲೆಕ್ಕಾಧಿಕಾರಿ ಮಂಜಪ್ಪ ಲೆಕ್ಕಪತ್ರ ಮಂಡಿಸಿದರು. ಇಂಜಿನಿಯರ್ ಶಿವಣ್ಣ, ಗ್ಯಾರಂಟಿ ಸಮಿತಿ ಸದಸ್ಯ ಸಲಾಂ ಕೆ.ಸಿ.ರೋಡು, ದಯಾನಂದ ಇದ್ದರು.
ಸಭೆಯಲ್ಲಿ ಭಾಗವಹಿಸುವಂತೆ ಮಾಹಿತಿ
ಪಿಡಿಒ ಕೇಶವ ಪೂಜಾರಿ ಪಾವೂರು ಮಾತನಾಡಿ, ಗ್ರಾಮಸಭೆ ತಾ.ಪಂ. ಅಧಿಕಾರಿಗಳು ನಿಗದಿಪಡಿಸುತ್ತಾರೆಯೇ ಹೊರತು ಗ್ರಾ.ಪಂ. ನಿಗದಿಪಡಿಸುವುದಲ್ಲ. ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ನಿರಂತರ ಗೈರಾಗಿದ್ದರಿಂದ ಕಳೆದ ಗ್ರಾಮಸಭೆ ರದ್ದಾಗಿತ್ತು. ಈ ಬಗ್ಗೆ ತಾಲೂಕು ಮತ್ತು ಜಿ.ಪಂ.ಗೆ ಮಾಹಿತಿ ನೀಡಿದ್ದೇವೆ. ಫೆ.19ಕ್ಕೆ ನಾನೇ ಸ್ವತಃ ಯೋಜನಾ ನಿರ್ದೇಶಕರನ್ನು ಭೇಟಿ ಮಾಡಿ ಸಭೆಯಲ್ಲಿ ಭಾಗವಹಿಸುವಂತೆ ತಿಳಿಸಿದ್ದೆ. ಸ್ಥಳೀಯ ಕಾರುಗಳ ನಂಬರ್ ಪಂಚಾಯಿತಿಗೆ ನೀಡಲಾಗಿದ್ದು, ವಾಹನ ಮಾಲೀಕರ ದಾಖಲೆ ಆರ್‌ಟಿಒ ನೀಡಬೇಕು ಎಂದಿದ್ದಾರೆ. ಗ್ರಾ.ಪಂ. ಸದಸ್ಯರು ನಿರಂತರ ನಾಲ್ಕು ಸಭೆಗೆ ಗೈರಾಗಿದ್ದು, ಜಿ.ಪಂ.ಗೆ ವರದಿ ಕೊಟ್ಟಿದ್ದು, ಪ್ರಾದೇಶಿಕ ಆಯೋಗದ ಶೋಕಾಸ್ ನೋಟಿಸ್ ನೀಡಿದೆ. ಸದಸ್ಯತ್ವ ರದ್ದು ತೀರ್ಪು ಬರದ ಕಾರಣ ಸಭೆಯ ನೋಟಿಸ್ ನೀಡಲಾಗುತ್ತದೆ ಎಂದು ಉತ್ತರ ನೀಡಿದರು.
ಸದಸ್ಯರ ಗೈರಿಗೆ ಗ್ರಾಮಸ್ಥರು ಗರಂ!
24 ಸದಸ್ಯರ ಪೈಕಿ ಆರು ಮಂದಿ ಮಾತ್ರ ಸಭೆ ಆರಂಭದಲ್ಲಿದ್ದರು. ನಾವು ಓಟು ಕೊಟ್ಟು ಪಂಚಾಯಿತಿಗೆ ಕಳಿಸಿದ್ದು, ಅವರ ಸೌಕರ್ಯ ನೋಡಿ ದಿನ ನಿಗದಿಪಡಿಸಬೇಕಾದರೆ ಅವರಿಗೆ ಬೇಜವಾಬ್ದಾರಿ ಏಕೆ? ಸಮಯ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.