ಮಂಗಳೂರು: ಕೇರಳದಿಂದ ಆಗಮಿಸುವವವರಿಗೆ ನಿರ್ಬಂಧ ವಿಧಿಸಿದ್ದರೂ, ಉಭಯ ರಾಜ್ಯಗಳ ನಡುವೆ ಜನರ ಸಂಚಾರಕ್ಕೆ ಮಂಗಳವಾರ ಸಮಸ್ಯೆ ಆಗಲಿಲ್ಲ.
ಕರ್ನಾಟಕದ ಗಡಿ ಪ್ರದೇಶ ತಲಪಾಡಿಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ, ಕೇರಳದಿಂದ ಬರುವ ವಾಹನಗಳ ತಪಾಸಣೆ ನಡೆಸಿ, ಮುಂದೆ ಸಾಗಲು ಅವಕಾಶ ಮಾಡಿಕೊಡುತ್ತಿದ್ದರು. ಬೆಳಗ್ಗೆಯಿಂದ ಸಾಯಂಕಾಲ ತನಕ ಸಂಚರಿಸುವವರ ಆರ್‌ಟಿಪಿಸಿಆರ್ ಪರೀಕ್ಷೆಗೆ ಅವಕಾಶ ಒದಗಿಸಲಾಗಿತ್ತು. ಕೇರಳದ ಗಡಿಯಲ್ಲಿ ಪೊಲೀಸರು ಕರ್ನಾಟಕದಿಂದ ಬರುವ ವಾಹನಗಳನ್ನು ಪರಿಶೀಲಿಸಿ ಬಿಡುತ್ತಿದ್ದರು. ಕೇರಳದಲ್ಲಿ ಕರೊನಾ ಸೋಂಕು ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ, ಅಲ್ಲಿಂದ ಬರುವವರಿಗೆ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು.