ಜಿಲ್ಲೆ

ತಲಪಾಡಿ-ಚೆಂಗಳ ಷಟ್ಪಥ ಕಾಮಗಾರಿ ಬಹುತೇಕ ಪೂರ್ಣ: ಕಾಸರಗೋಡಿನಲ್ಲಿ ಸಚಿವ ಮುಹಮ್ಮದ್ ರಿಯಾಜ್ ಮಾಹಿತಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಷಟ್ಪಥವಾಗಿ ಅಭಿವೃದ್ಧಿಗೊಂಡಿರುವ ತಲಪಾಡಿಯಿಂದ ಚೆಂಗಳವರೆಗಿನ ಮೊದಲ ರೀಚ್‌ನ 39ಕಿ.ಮೀ ಉದ್ದದ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ರಸ್ತೆ ವಾಹನ ಸಂಚಾರಕ್ಕೆ ತೆರೆದುಕೊಳ್ಳುವ ಮೂಲಕ ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಲಿದೆ ಎಂದು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ.ಮುಹಮ್ಮದ್ ರಿಯಾಜ್ ಹೇಳಿದರು.

ಚೆಂಗಳ, ಕಾಸರಗೋಡು, ಉಪ್ಪಳ ಹಾಗೂ ತಲಪಾಡಿವರೆಗೆ ಭೇಟಿ ನೀಡಿ ರಸ್ತೆ ಕಾಮಗಾರಿ ಪರಿಶೀಲಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯು ಕಾಸರಗೋಡಿನ ಬೆಳವಣಿಗೆಗೆ ಮಹತ್ವದ ದಾರಿ ಮಾಡಿಕೊಡಲಿದೆ ಎಂದರು.

ಎರಡು ಫ್ಲೈಓವರ್‌ಗಳು, ನಾಲ್ಕು ಪ್ರಮುಖ ಸೇತುವೆಗಳು, ನಾಲ್ಕು ಸಣ್ಣ ಸೇತುವೆಗಳು, 21 ಅಂಡರ್‌ಪಾಸ್‌ಗಳು, 10 ಪಾದಚಾರಿ ಸೇತುವೆಗಳು ಮತ್ತು ಎರಡು ಮೇಲ್ಸೇತುವೆಗಳು ಪೂರ್ಣಗೊಂಡಿವೆ. ಇವುಗಳಲ್ಲಿ ಕಾಸರಗೋಡು ನಗರದ ಮೂಲಕ ಹಾದುಹೋಗುವ 1.12 ಕಿ.ಮೀ ಉದ್ದದ ಏಕಸ್ತಂಭದೊಂದಿಗೆ ನಿರ್ಮಾಣಗೊಂಡಿರುವ ಮೇಲ್ಸೇತುವೆ ಪ್ರಮುಖ ಆಕರ್ಷಣೆ. ಇದು ದಕ್ಷಿಣ ಭಾರತದಲ್ಲಿ ನಿರ್ಮಿಸಲಾದ ಮೊದಲ ಸಿಂಗಲ್-ಪಿಲ್ಲರ್ ಬಾಕ್ಸ್ ಗರ್ಡರ್ ಸೇತುವೆಯಾಗಿದ್ದು, 27 ಮೀಟರ್ ಅಗಲವಿದೆ. ಇದರೊಂದಿಗೆ, ಉಪ್ಪಳದಲ್ಲಿ 210 ಮೀಟರ್ ಉದ್ದದ ಮತ್ತೊಂದು ಮೇಲ್ಸೇತುವೆ ನಿರ್ಮಿಸಲಾಗಿದೆ. ಮೊಗ್ರಾಲ್, ಕುಂಬಳೆ, ಶಿರಿಯಾ ಮತ್ತು ಉಪ್ಪಳ ನದಿಗಳನ್ನು ಸಂಪರ್ಕಿಸುವ ದೊಡ್ಡ ಸೇತುವೆಗಳನ್ನು ಸಹ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಎಂ.ರಾಜಗೋಪಾಲನ್, ಎನ್‌ಎಚ್‌ಎಐ ಉಪ ವ್ಯವಸ್ಥಾಪಕ ಜಸ್‌ಪ್ರೀತ್, ಟೀಮ್ ಲೀಡರ್ ಎಸ್.ಕೆ.ಸಿನ್ಹಾ, ಯುಎಲ್‌ಸಿಸಿ ನಿರ್ದೇಶಕ ಪಿ.ಪ್ರಕಾಶನ್, ಕೆ.ಟಿ.ರಾಜನ್, ಪಿ.ಕೆ.ಶ್ರೀಜಿತ್, ಯೋಜನಾ ವ್ಯವಸ್ಥಾಪಕ ಎಂ.ನಾರಾಯಣನ್ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸಮಾಲೋಚಿಸಿ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮೂಲಕ 5800 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಯೋಜನೆ ಜಾರಿಗೊಳಿಸಲಾಗಿದೆ. ಪಿ.ಎ.ಮುಹಮ್ಮದ್ ರಿಯಾಜ್, ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವರು https://www.vijayavani.net/inauguration-of-new-assembly-hall-in-arikegudde https://www.vijayavani.net/do-not-eat-mangoes-at-night