ಜಿಲ್ಲೆ

₹6 ಕೋಟಿ ವೆಚ್ಚದಲ್ಲಿ ತಲಕಾಯಲಬೆಟ್ಟ ಅಭಿವೃದ್ಧಿ

12ರಂದು ಭೂಮಿಪೂಜೆ ಸಿದ್ಧಗೊಂಡಿದೆ ನೀಲಿನಕ್ಷೆ

ಶಿಡ್ಲಘಟ್ಟ: ತಾಲೂಕಿನ ತಲಕಾಯಲಬೆಟ್ಟದ ಶ್ರೀ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ದೇವಾಲಯಕ್ಕೆ ರಾಜಗೋಪುರ, ಧ್ವಜಸ್ತಂಭ, ಗಣಪತಿ ಮಂಟಪ, ಅಶ್ವತ್ಥಕಟ್ಟೆ ಸೇರಿ 6 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ನೀಲಿನಕ್ಷೆ ಸಿದ್ಧವಾಗಿದೆ.

ಪಾಪಾಗ್ನಿ ನದಿ ತಟದಲ್ಲಿ ನೆಲೆಸಿರುವ, ತಿರುಪತಿ ತಿಮ್ಮಪ್ಪನ ಬೆಟ್ಟದ ಸಾಲಿಗೆ ಹೊಂದಿಕೊಂಡ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ತಲಕಾಯಲಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ್ದು ತಾಲೂಕಿನ ಏಕೈಕ ಗ್ರೇಡ್-1 ದೇವಾಲಯ ಆಗಿದೆ.

ನೂತನವಾಗಿ ರಚನೆಯಾದ ದೇವಾಲಯದ ವ್ಯವಸ್ಥಾಪನಾ ಸಮಿತಿ ದೇವಾಲಯದ ಅಭಿವೃದ್ಧಿ ಮತ್ತು ಭಕ್ತರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿದ್ದು, ಇದಕ್ಕಾಗಿ ನೀಲಿನಕ್ಷೆ ಸಿದ್ಧಪಡಿಸಿದೆ. ಸರ್ಕಾರ ಮತ್ತು ದಾನಿಗಳ ನೆರವಿನಿಂದ ಈ ಎಲ್ಲವನ್ನೂ ಕಾರ್ಯಗತಗೊಳಿಸಲು ಮುಂದಾಗಿದೆ. ರಾಜಗೋಪುರ ನಿರ್ಮಾಣಕ್ಕೆ ನೆರವು ನೀಡುವಂತೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವ್ಯವಸ್ಥಾಪನಾ ಸಮಿತಿಯಿಂದ ಮನವಿ ಮಾಡಿದ್ದು, 2 ಕೋಟಿ ರೂ.ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.

ದೊರೆತ ಅನುದಾನದ ಭರವಸೆ

ದೇವಾಲಯ ವ್ಯವಸ್ಥಾಪನಾ ಸಮಿತಿಯಲ್ಲೂ ಸುಮಾರು 2 ಕೋಟಿ ರೂ.ಗಳಿದ್ದು, ಇದರಲ್ಲಿ ಶೇ.50 ಅನುದಾನವನ್ನು ಕಾಮಗಾರಿಗಳಿಗೆ ಬಳಸಿಕೊಳ್ಳಬಹುದಾಗಿದೆ. ಜತೆಗೆ ದಾನಿಗಳು, ಭಕ್ತರು, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರ ಅನುದಾನ ಬಳಸಿಕೊಳ್ಳಲು ಚಿಂತಿಸಲಾಗಿದೆ. ಈಗಾಗಲೇ ಅವರೆಲ್ಲರನ್ನೂ ಸಂಪರ್ಕಿಸಿದ್ದು, ನೆರವು ನೀಡುವ ಭರವಸೆಯೂ ದೊರೆತಿದೆ. ಸಮಿತಿ ಅಧ್ಯಕ್ಷ ಡಿ.ಪಿ.ನಾಗರಾಜ್ ಅಧ್ಯಕ್ಷತೆಯಲ್ಲಿ ನಿರ್ದೇಶಕರ ಸಭೆ ನಡೆಸಿ ಈ ಬಗ್ಗೆ ಚರ್ಚಿಸಲಾಗಿದ್ದು, ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ.

"ಫೆ.12ರಂದು ದೇವಾಲಯದ ಬ್ರಹ್ಮರಥೋತ್ಸವ ನಡೆಯಲಿದ್ದು, ಅಂದು ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೂ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಬಿ.ಎನ್.ರವಿಕುಮಾರ್ ಅವರಿಂದ ಭೂಮಿಪೂಜೆ ನೆರವೇರಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಮುಂದಿನ 2 ವರ್ಷದಲ್ಲಿ ಈ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ." - ಡಿ.ಪಿ.ನಾಗರಾಜ್, ಅಧ್ಯಕ್ಷ, ವ್ಯವಸ್ಥಾಪನಾ ಸಮಿತಿ.