ಜಿಲ್ಲೆ

ತಲಕಾವೇರಿಯಲ್ಲಿ ಜಲರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ

ಸುನಿಲ್ ಪೊನ್ನೇಟಿ

ತಲಕಾವೇರಿ:

ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಿಗದಿಯಂತೆ ಶುಕ್ರವಾರ ಮಧ್ಯಾಹ್ನ 1.44ರ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಸಂಭವಿಸಿತು. ಜಿಲ್ಲೆ ಮಾತ್ರವಲ್ಲದೆ ರಾಜ್ಯ, ಹೊರ ರಾಜ್ಯದಿಂದ ಆಗಮಿಸಿದ್ದ ಸಾವಿರಾರು ಭಕ್ತರು ಈ ಕೌತುಕದ ಕ್ಷಣಕ್ಕೆ ಸಾಕ್ಷಿ ಆದರು. ಶ್ರೀ ಕ್ಷೇತ್ರದಲ್ಲಿ ಸೇರಿದ್ದ ಮಾತೆ ಕಾವೇರಿಯ ಭಕ್ತರು ಈ ಸಂದರ್ಭ ಜೈ ಜೈ ಮಾತಾ, ಕಾವೇರಿ ಮಾತಾ ಘೋಷಣೆಗಳನ್ನು ಕೂಗಿ ಪುನೀತರಾದರು.

ಇದಕ್ಕೂ ಮೊದಲು ತೀರ್ಥೋದ್ಭವ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಯಿAದಲೇ ಪ್ರಧಾನ ಅರ್ಚಕ ಟಿ.ವಿ. ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ವಿವಿಧ ಪೂಜಾ ವಿದಿವಿಧಾನಗಳು ನಡೆದವು. ಕುಂಕುಮಾರ್ಚನೆ, ಮಹಾಪೂಜೆಯ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿದ ನಂತರ ಬ್ರಹ್ಮಕುಂಡಿಕೆಯಲ್ಲಿ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು.

ತೀರ್ಥೋದ್ಭವ ಆಗುತ್ತಿದ್ದಂತೆಯೇ ಅರ್ಚಕರು ಬ್ರಹ್ಮಕುಂಡಿಕೆಯಿAದ ಪವಿತ್ರ ತೀರ್ಥ ತೆಗೆದು ಭಕ್ತಾದಿಗಳ ಮೇಲೆ ಪ್ರೋಕ್ಷಣೆ ಮಾಡಿದರು. ಈ ಸಂದರ್ಭ ಬಾಟಲಿ, ಪಾತ್ರೆ, ಕ್ಯಾನ್‌ಗಳೊಂದಿಗೆ ತೀರ್ಥ ಸಂಗ್ರಹಕ್ಕೆ ಭಕ್ತರು ಮುಗಿಬಿದ್ದ ದೃಶ್ಯ ಕಂಡು ಬಂತು. ನೂಗು ನುಗ್ಗಲು ತಡೆಗೆ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ಭಕ್ತರ ಉತ್ಸಾಹದ ಮುಂದೆ ಯಾವುದೂ ಲೆಕ್ಕಕ್ಕೇ ಬರಲಿಲ್ಲ. ತೀರ್ಥೋದ್ಭವಕ್ಕೂ ಮೊದಲು ತೀರ್ಥ ಸಂಗ್ರಹಕ್ಕಾಗಿ ಶ್ರೀ ಕ್ಷೇತ್ರ ಭಾಗಮಂಡಲದಿAದ ಸಾಂಪ್ರದಾಯಿಕವಾಗಿ ಬೆಳ್ಳಿಯ ಕೊಡದೊಂದಿಗೆ ಮೆರವಣಿ ಮೂಲಕ ದೇಗುಲದ ಪ್ರಮುಖರು ಆಗಮಿಸಿದರು.

ತೀರ್ಥೋದ್ಭವ ನಂತರ ಮಾತೆ ಕಾವೇರಿ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ಸಂಜೆ ತನಕವೂ ಮುಂದುವರಿದವು. ದಿನಪೂರ್ತಿ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ನಡೆಯಿತು. ಇನ್ನು ಒಂದು ತಿಂಗಳ ಕಾಲ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಶ್ರೀ ಕಾವೇರಿ ಜಾತ್ರೆ ನಡೆಯಲಿದೆ. ತಲಕಾವೇರಿ ತಕ್ಕ ಮುಖ್ಯಸ್ಥ ಕೋಟಿ ಮೋಟಯ್ಯ, ಭಾಗಮಂಡಲದ ತಕ್ಕ ಮುಖ್ಯಸ್ಥ ಬಳ್ಳಡ್ಕ ಅಪ್ಪಾಜಿ ಈ ಸಂದರ್ಭ ಇದ್ದರು.

ಈ ವರ್ಷ ಮಧ್ಯಾಹ್ನದ ವೇಳೆಗೆ ತೀರ್ಥೋದ್ಭವ ಸಂಭವಿಸಿದ ಕಾರಣ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬAದರು. ವಿವಿಧ ಕೊಡವ ಸಂಘಟನೆಗಳ ಸದಸ್ಯರು ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಯಲ್ಲಿ 8 ಕಿಮೀ ದೂರದ ತಲಕಾವೇರಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ದಂಪತಿ ಕೂಡ ಸಾಂಪ್ರದಾಯಿಕ ದಿರಿಸಿನಲ್ಲಿ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಕೊಡಗು-ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ಮಹಾರಾಜರ ಪೋಷಾಕಿನಲ್ಲಿ 8 ಕಿಮೀ ಪಾದಯಾತ್ರೆ ಮಾಡಿದ್ದು ವಿಶೇಷವಾಗಿತ್ತು. ತೀಥೋದ್ಭವ ಸಂದರ್ಭ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ಬೆಳಗ್ಗೆಯಿಂದಲೇ ಹಲವರು ಪಿಂಡಪ್ರದಾನ ಮಾಡುತ್ತಿದ್ದ ದೃಶ್ಯ ಕಂಡುಬAತು. ನಂತರ ಭಗಂಡೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ತಲಕಾವೇರಿ ಕಡೆಗೆ ಪಯಣ ಬೆಳೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಡಿಕೇರಿಯಿಂದ ಭಾಗಮಂಡಲಕ್ಕೆ ವಿಶೇಷ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಭಾಗಮಂಡಲದಿAದ ತಲಕಾವೇರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಭಕ್ತರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗಿತ್ತು.

ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗ, ಕೈಲಾಶ ಆಶ್ರಮ ವತಿಯಿಂದ ಹಾಗೂ ಭಾಗಮಂಡಲದಲ್ಲಿ ಗಜಾನನ ಯುವಕ ಸಂಘದಿAದ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.