ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಹೂವಿನಹಡಗಲಿ ತಾಲೂಕಿನ ತಳಕಲ್ಲು ಸೇರಿ ವಿವಿಧ ಗ್ರಾಮದ ರೈತರು ಮನವಿ ಸಲ್ಲಿಸಿದರು. 
ಜಿಲ್ಲೆ

ತಳಕಲ್ಲು ಕೆರೆ ತುಂಬಿಸಲು ಆಗ್ರಹ: ಮಾಜಿ ಸಿಎಂ ಯಡಿಯೂರಪ್ಪಗೆ ರೈತರ ಮನವಿ

ಹೂವಿನಹಡಗಲಿ: ತಾಲೂಕಿನ ತಳಕಲ್ಲು ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾ ವಿಜಯ್ ನೇತೃತ್ವದಲ್ಲಿ ತಳಕಲ್ಲು, ಇಟ್ಟಗಿ, ಹೊಳಗುಂದಿ , ಇಟ್ಟಿಗಿ, ಮಹಾಜನದಹಳ್ಳಿ, ಕನ್ನಿಹಳ್ಳಿ ಗ್ರಾಮಗಳ 60ಕ್ಕೂ ಹೆಚ್ಚು ರೈತರು ಗುರುವಾರ ಮಾಜಿ ಸಿಎಂ ಯಡಿಯೂರಪ್ಪಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.

ತಳಕಲ್ಲು ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯ ಕಾಮಗಾರಿ ಕಳಪೆಯಾಗಿದೆ. ಹಳೆಯ ಪೈಪ್‌ಗಳು ಒಡೆದಿವೆ. ಕಳೆದ 5 ವರ್ಷಗಳಿಂದ ಕೆರೆಗೆ ನೀರು ಹರಿಸಿಲ್ಲ. ಈ ಭಾಗದ ರೈತರು ಕಾಲುವೆಯ ನೀರು, ಕೆರೆ ನೀರನ್ನೇ ನಂಬಿಕೊಂಡಿದ್ದಾರೆ. ಈ ವರ್ಷ ಮಳೆಯಾಗದ ಕಾರಣ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಕೂಡಲೇ ತಳಕಲ್ಲು ಕೆರೆ ಕಾಮಗಾರಿಯ ಪೈಪ್‌ಗಳನ್ನು ತೆಗೆದು ಹೊಸ ಪೈಪ್‌ಗಳನ್ನು ಹಾಕಿ ನೀರು ಹರಿಸಬೇಕು ಎಂದು ರೈತರು ಆಗ್ರಹಿಸಿದರು.

ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿ, ನಿಮ್ಮ ಸಮಸ್ಯೆ ಬಗೆಹರಿಸಲು ಸಿಎಂ ಬಸವರಾಜ ಬೊಮ್ಮಾಯಿಗೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು. ನಿವೃತ್ತ ಇಂಜಿನಿಯರ್ ಪ್ರಭಾಕರ್, ರೈತರಾದ ಚಂದ್ರಪ್ಪ, ಎಂ.ಚನ್ನಬಸಪ್ಪ, ಎ.ಮಿನಿಗೌಡ, ವಕೀಲ ನಾಗರಾಜ್, ಕೆ.ಶಿವಮೂರ್ತಿ, ವಸಂತ, ನಾಗರಾಜ್, ಕರಿಬಸಪ್ಪ, ಉಮೇಶ, ಕರಿಯಪ್ಪ ಇತರರಿದ್ದರು.