ಮಡಿಕೇರಿ: ಪವಿತ್ರ ಕೇತ್ರ ತಲಕಾವೇರಿಯಲ್ಲಿ ಜೀವನದಿ ಕಾವೇರಿಯ ತೀರ್ಥೋದ್ಭವಕ್ಕೆ ದಿನಗಣನೆ ಆರಂಭಗೊಂಡಿದೆ. ಈ ನಡುವೆ ಕ್ಷೇತ್ರಕ್ಕೆ ಬರುತ್ತಿರುವ ಭಕ್ತರ ಹಾಗೂ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ ನಿರ್ಭಯವಾಗಿ ನಡೆಯುತ್ತಿದೆ. ಇದಕ್ಕೆ ತಕ್ಷಣ ಕಡಿವಾಣ ಹಾಕಿ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕೆಂದು ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಕೊರವೇ ಅಧ್ಯಕ್ಷ ಅಚ್ಚಂಡಿರ ಪವನ್ ಪೆಮ್ಮಯ್ಯ, ಕಳೆದವಾರ ಮಡಿಕೇರಿ ದಸರಾ ಜನೋತ್ಸವದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ರಾರಾಜಿಸಿದೆ. ನಗರದಲ್ಲಿ ಇಂದು ಕೂಡ ಅಲ್ಲಲ್ಲಿ ಪ್ಲಾಸ್ಟಿಕ್ ರಾಶಿ ಕಂಡು ಬಂದಿದ್ದು, ಪರಿಸರ ಕಲುಷಿತಗೊಂಡಿದೆ. ಇದೇ ಪರಿಸ್ಥಿತಿ ಕಾವೇರಿ ತುಲಾಸಂಕ್ರಮಣದ ಸಂದರ್ಭ ಪುಣ್ಯ ಕ್ಷೇತ್ರಗಳಲ್ಲಿ ಪುನರಾವರ್ತನೆಯಾಗುವ ಸಾಧ್ಯತೆಗಳಿದ್ದು, ತಕ್ಷಣ ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾ.ಪಂ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ರಸ್ತೆ ಬದಿ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡದಂತೆ ಮತ್ತು ಎಲ್ಲೆಂದರಲ್ಲಿ ಕಸ ಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ನೀರಿನ ಖಾಲಿ ಬಾಟಲಿಗಳನ್ನು ನದಿ ಭಾಗದಲ್ಲಿ ಹಾಕದಂತೆ ಕ್ರಮ ಕೈಗೊಳ್ಳಬೇಕು. ಬಾಟಲಿಗಳನ್ನು ಹಾಕಲು ಬುಟ್ಟಿಗಳನ್ನಿಟ್ಟು ಸೂಕ್ತ ಸೂಚನೆಗಳನ್ನು ನೀಡಬೇಕು. ಭಾಗಮಂಡಲ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆಗೊಳಪಡಿಸುವುದು ಅಥವಾ ಪ್ಲಾಸ್ಟಿಕ್ ತ್ಯಾಜ್ಯ ಇದೆಯೇ ಎಂದು ಖಾತ್ರಿ ಪಡಿಸಿಕೊಳ್ಳುವ ಕಾರ್ಯ ನಡೆಯಬೇಕು. ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಮಾಡುವವರಿಗೆ ದಂಡ ವಿಧಿಸಬೇಕು ಹಾಗೂ ಎರಡೂ ಕ್ಷೇತ್ರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಭಕ್ತರಿಗೆ ಮುಕ್ತ ಅವಕಾಶ ನೀಡಿ: ಕೊಡಗಿನ ಭಕ್ತರಿಗೆ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ಪ್ರಾರ್ಥನೆಗೆ ಮುಕ್ತ ಅವಕಾಶ ನೀಡಬೇಕು. ಆಡಳಿತ ವ್ಯವಸ್ಥೆ ವಿಧಿಸುವ ನಿಯಮಗಳು ಭಕ್ತರ ಧಾರ್ಮಿಕ ಭಾವನೆಗಳಿಗೆ ಅಡ್ಡಿಯಾಗಬಾರದು. ಇತ್ತೀಚಿನ ವರ್ಷಗಳಲ್ಲಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತಿದ್ದು, ಕೊಡಗಿನ ಭಕ್ತರ ಮನಸ್ಸಿಗೆ ನೋವಾಗುವ ಪ್ರಸಂಗಗಳೂ ನಡೆದಿದೆ. ಇದಕ್ಕೆ ಮತ್ತೆ ಅವಕಾಶ ನೀಡದೆ ತಾಯಿ ಕಾವೇರಿಯ ತುಲಾಸಂಕ್ರಮಣವನ್ನು ಎಲ್ಲರೂ ಶ್ರದ್ಧೆಯಿಂದ ಆಚರಿಸಲು ಉತ್ತಮ ವಾತಾವರಣ ಸೃಷ್ಟಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಸಕ್ತಿ ತೋರಬೇಕೆಂದು ಪವನ್ ಪೆಮ್ಮಯ್ಯ ಮನವಿ ಮಾಡಿದ್ದಾರೆ.