ಜಿಲ್ಲೆ

ನ.19ರಿಂದ 25: ಯಕ್ಷಗಾನ ತಾಳಮದ್ದಳೆ ಸಪ್ತಾಹ

Mangaluru - Hariprasad Rai



ಮಂಗಳೂರು : ಯಕ್ಷಾಂಗಣ ಮಂಗಳೂರು, ಡಾ.ದಯಾನಂದ ಪೈ- ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿ.ವಿ. ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ಸಹಯೋಗದಲ್ಲಿ ನ. 19ರಿಂದ 25ರವರೆಗೆ ಮಂಗಳೂರು ವಿ.ವಿ.ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ನಡೆಯಲಿದೆ.
ನ.19ರಂದು ಮಧ್ಯಾಹ್ನ 2.30ರಿಂದ ಧ್ರುವ ಚರಿತ್ರೆ ತಾಳಮದ್ದಳೆ ನಡೆಯಲಿದೆ. ಸಾಯಂಕಾಲ 4.30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯ ಮುಖ್ಯಸ್ಥೆ ಗಾಯತ್ರಿ ಆರ್. ನೆರವೇರಿಸಲಿದ್ದಾರೆ. ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ತಾಳಮದ್ದಳೆ ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ,ಸಮಾರಂಭದಲ್ಲಿ ಕಲಾಪೋಷಕ ಯಾದವ ಕೋಟ್ಯಾನ್ ಪೆರ್ಮುದೆ ಇವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ನೀಡಲಾಗುವುದು. ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಕ್ಷಾಂಗಣದ ಹನ್ನೊಂದನೇ ವರ್ಷದ ನುಡಿಹಬ್ಬದ ಪ್ರಯುಕ್ತ ಶ್ರೀ ಹರಿ ಚರಿತ್ರೆ ಎಂಬ ಪರಿಕಲ್ಪನೆಯಲ್ಲಿ ಏಳು ವಿಭಿನ್ನ ಯಕ್ಷಗಾನ ಪ್ರಸಂಗಗಳ ತಾಳಮದ್ದಳೆ ಪ್ರತೀ ದಿನ ಸಾಯಂಕಾಲ 4.30ಕ್ಕೆ ನಡೆಯಲಿದೆ. ನ.25 ರಂದು ಸಪ್ತಾಹದ ಸಮಾರೋಪ ನಡೆಯಲಿದ್ದು, ಯಕ್ಷಗಾನ ಅರ್ಥಧಾರಿ ಮತ್ತು ಹರಿದಾಸ ಮಹಾಬಲ ಶೆಟ್ಟಿ ಕೂಡ್ಲು ಅವರಿಗೆ 2023ನೇ ಸಾಲಿನ ಯಕ್ಷಾಂಗಣ ಗೌರವ ಪ್ರಶಸ್ತಿಯನ್ನು ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ನೀಡಿ ಗೌರವಿಸಲಿದ್ದಾರೆ ಎಂದು ಅವರು ತಿಳಿಸಿದರು. ತುಳು ನಾಟಕ ಬ್ರಹ್ಮ ದಿ. ಬಿ. ರಾಮ ಕಿರೋಡಿಯನ್ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಶತಮಾನ ಸಂಸ್ಮರಣೆಯು ಯಕ್ಷಾಂಗಣ ವೇದಿಕೆಯಲ್ಲಿ ನಡೆಯಲಿದೆ. ಹಿರಿಯ ರಂಗ ನಿರ್ದೇಶಕ ತಮ್ಮ ಲಕ್ಷ್ಮಣ ಅವರಿಗೆ ರಾಮ ಕಿರೋಡಿಯನ್ -100 ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಉಪಾಧ್ಯಕ್ಷ ರಾದ ಎಂ. ಸುಂದರ ಶೆಟ್ಟಿ, ಕೆ.ರವೀಂದ್ರ ರೈ ಕಲ್ಲಿಮಾರು, ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಉಪಸ್ಥಿತರಿದ್ದರು.