ಹಗರಿಬೊಮ್ಮನಹಳ್ಳಿ: ಲೂಕಿನ ವಿವಿಧೆಡೆ ಈರುಳ್ಳಿಯ ಕಳಪೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಿದ ಖಾಸಗಿ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈರುಳ್ಳಿ ಬೆಳೆಗಾರರ ಸಂಘದ ಪದಾಧಿಕಾರಿಗಳು ತೋಟಗಾರಿಕೆ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ವಿಜಯಕುಮಾರಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಗುಡ್ಡದ ಮೋಹನ್ ರೆಡ್ಡಿ ಮಾತನಾಡಿ, ಖಾಸಗಿ ಕಂಪನಿಗಳು ಮಾರಾಟ ಮಾಡಿರುವ ಬಿತ್ತನೆಬೀಜಗಳು ಸರಿಯಾಗಿ ಮೊಳಕೆ ಬಾರದೆ ರೈತರು ತುಂಬಾ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು ಎಂದರು.
ರೈತ ಮುಖಂಡ ಮೈನಳ್ಳಿ ಕೊಟ್ರೇಶ ಮಾತನಾಡಿ, ರಾಜ್ಯದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯುತ್ತಿದ್ದು ಸರ್ಕಾರ ಕ್ವಿಂಟಾಲ್ ಈರುಳ್ಳಿಗೆ 4 ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು. ಈರುಳ್ಳಿ ಬೆಳೆ ಶೇಖರಣಾ ಘಟಕಗಳು ಮತ್ತು ಖರೀದಿ ಕೇಂದ್ರಗಳ ಸ್ಥಾಪನೆ ಮಾಡಬೇಕು. ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿ ರೈತರ ಹಣ ಮತ್ತು ಸಮಯ ವ್ಯರ್ಥ ಮಾಡಿದ ಖಾಸಗಿ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಎಂ.ಸೋಮಪ್ಪ, ಅಳವಂಡಿ ಪ್ರಕಾಶ, ಮೈನಳ್ಳಿ ನಿಂಗಾರೆಡ್ಡಿ, ಹನುಮರೆಡ್ಡಿ, ಎಚ್.ಮಹೇಶ್, ಪಿ.ಪಕ್ಕೀರಪ್ಪ, ಎ.ಮಹೇಶ, ಎ.ಭದ್ರಗೌಡ, ಎ.ಎಲ್ಲರೆಡ್ಡಿ, ಮರಿಯಪ್ಪ, ಕೊಟ್ರೇಶ, ಮೌನೇಶ್ ಇತರರು ಇದ್ದರು.