ಜಿಲ್ಲೆ

ಶೀಘ್ರ ಬೃಹತ್ ನೀರುಗಾಲುವೆಗಳ ಕಾಮಗಾರಿ ಕೈಗೆತ್ತಿಕೊಳ್ಳಿ :ಜಯರಾಮ್ ರಾಯಪುರ ಸೂಚನೆ

ಹರೀಶ್​​ ಕೆ.ಸಿ.

ಬೆಂಗಳೂರು: ಬೃಹತ್ ನೀರುಗಾಲುವೆಗಳ ಸಮೀಪ ಅಗತ್ಯ ಕಾಮಗಾರಿಗಳನ್ನು ಕೈಗೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಅಧಿಕಾರಿಗಳಿಗೆ ಸೂಚಿಸಿದರು.

ದಕ್ಷಿಣ ವಲಯ ವ್ಯಾಪ್ತಿಯ ಬೃಹತ್ ನೀರುಗಾಲುವೆ ಪರಿಶೀಲಿಸಿ ಮಾತನಾಡಿದರು. ಮಳೆಗಾಲದ ವೇಳೆ ರಾಜಕಾಲುವೆಗಳಿಂದ ಸಮಸ್ಯೆಯಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜಕಾಲುವೆಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ಅಗಾಗ್ಗೆ ತೆರವುಗೊಳಿಸಬೇಕು ಎಂದರು. ಬಳಿಕ, ಪದ್ಮನಾಭನಗರ ಕ್ಷೇತ್ರದ ವಾರ್ಡ್ ಸಂಖ್ಯೆ 165ರಲ್ಲಿ ಬೆಸ್ಕಾಂ, ಕೆಪಿಟಿಸಿಎಲ್ ಕಚೇರಿ ಆವರಣದಲ್ಲಿ ಹಾದು ಹೋಗಿರುವ ಬೃಹತ್ ಮಳೆ ನೀರುಗಾಲುವೆ ಕಾಮಗಾರಿ ಪರಿಶೀಲಿಸಿದರು. ಇದೇ ವೇಳೆ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಈ ಕಚೇರಿಗಳಿಗೆ ಸಾರ್ವಜನಿಕರು ಭೇಟಿ ನೀಡುವ ಕಾರಣ ನೀರುಗಾಲುವೆಯ ಆರ್‌ಸಿಸಿ ಚಾವಣಿ ಮುಚ್ಚುವಂತೆ ಮನವಿ ಮಾಡಿದರು. ಬಳಿಕ, ಮನವಿ ಸ್ಪಂದಿಸಿದ ಜಯರಾಮ್ ರಾಯಪುರ, ಮಳೆ ನೀರುಗಾಲುವೆ ಎತ್ತರಿಸಿ ಚಿಕ್ಕದಾದ ಹೈಡ್ರಾಲಿಕ್ ಎಸ್ಕವೇಟರ್ ಹೋಗಲು ಛಾವಣಿಯಿಂದ ಮುಚ್ಚುವಂತೆ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಮೃದ್ದಿ ಬಡಾವಣೆಯಲ್ಲಿ ನಿರ್ಮಿಸಿರುವ ಲೀಡ್ ಆಫ್​​ ಡ್ರೈನ್ ಪರಿಶೀಲಿಸಿ, ಹಳೆಯ ರಸ್ತೆ ಬದಿ ಚರಂಡಿಗೆ ಒಂದು ಮೀಟರ್ ತಡೆಗೋಡೆ ನಿರ್ಮಿಸಿ ಕೆರೆ ತುಂಬಿ ಬರುವ ನೀರು ಚರಂಡಿಗೆ ಹರಿಯುವಂತೆ ಮಾಡಲು ವ್ಯವಸ್ಥೆ ಕಲ್ಪಿಸಬೇಕೆಂದರು. ಬಳಿಕ, ವಿಜಯನಗರ ಕ್ಷೇತ್ರದ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಹರಿಯುತ್ತಿರುವ ವೃಷಭಾವತಿ ಮಳೆ ನೀರುಗಾಲುವೆ ಪರಿಶೀಲಿಸಿದರು. ಹೊರವರ್ತುಲ ರಸ್ತೆಯ ಸೇತುವೆಯ ಕೆಳಭಾಗದ ವೆಂಟ್ ಚಿಕ್ಕದಾಗಿರುವ ಕಾರಣ ಹೆಚ್ಚು ಮಳೆ ಬಿದ್ದ ಸಂದರ್ಭದಲ್ಲಿ ಪ್ರವಾಹ ಆಗುವುದನ್ನು ತಡೆಯಲು ಆಗಾಗ್ಗೆ ಹೂಳನ್ನು ತೆಗೆಯಲು ಸೂಚಿಸಿದರು. ನಾಯಂಡಹಳ್ಳಿ ಜಂಕ್ಷನ್ ವೃತ್ತದ ಎಂ.ಆರ್.ಕನ್ವೇನ್‌ಷನ್ ಹಾಲ್ ಮುಂಭಾಗದಲ್ಲಿರುವ ಅರ್ಧ ಎಕರೆ ಖಾಲಿ ಜಾಗವನ್ನು ಘನ ತ್ಯಾಜ್ಯ ನಿರ್ವಹಣೆ ಉದ್ದೇಶಗಳಿಗೆ ಅಥವಾ ಬೃಹತ್ ನೀರುಗಾಲುವೆ ಉದ್ದೇಶಕ್ಕೆ ಮಾತ್ರ ಮೀಸಲಿಡುವಂತೆ ಜಯರಾಮ್ ರಾಯಪುರ ಹೇಳಿದರು.

ಗಾಳಿ ಆಂಜನೇಯ ದೇವಸ್ಥಾನದ ಹಿಂಭಾಗದ ವೃಷಭಾವತಿ ಮಳೆ ನೀರುಗಾಲುವೆಯನ್ನು ಪರಿಶೀಲಿಸಿ, ಹೂಳನ್ನು ಹೊರ ತೆಗೆಯಲು ಅನುಕೂಲವಾಗುವಂತೆ ಬೇರೆ ಮಾದರಿ ರ‌್ಯಾಂಪ್ ನಿರ್ಮಿಸಲು ಸೂಚಿಸಿದರು. ಮುಖ್ಯ ಅಭಿಯಂತರ ರಾಜೇಶ್, ಕಾರ್ಯಪಾಲಕ ಅಭಿಯಂತರ ಚೇತನ್ ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಸೇರಿ ಮತ್ತಿತರರಿದ್ದರು.