ಮೈಸೂರು: ಹಿಂದಿನ ಕಾಲದಲ್ಲಿ ನಮ್ಮ ಋಷಿ ಮುನಿಗಳು ಕೃಷಿಕರಾಗಿದ್ದರು. ಅಗ್ನಿ, ವಾಯು, ಹಾಗೂ ವರುಣನನ್ನು ಪ್ರತಿನಿತ್ಯ ಪ್ರಾರ್ಥಿಸಿ ತಮ್ಮ ಕೃಷಿ ಪ್ರಾರಂಭಿಸುತ್ತಿದ್ದರು ಎಂದು ಕೃಷಿ ತಜ್ಞ ಡಾ. ಹಾಲತಿ ಸೋಮಶೇಖರ್ ಹೇಳಿದರು.
ಸುತ್ತೂರಿನಲ್ಲಿ ಆಯೋಜಿಸಿದ್ದ ರೈತರ ಶಿಬಿರದಲ್ಲಿ ಮಾತನಾಡಿದ ಅವರು, ವೇದಕೃಷಿ ಅಳವಡಿಸಿಕೊಳ್ಳಲು ಇಚ್ಛಿಸುವ ರೈತರು ತಮ್ಮ ಕೃಷಿ ಭೂಮಿಯನ್ನು ಪ್ರಯೋಗಾಲಯವನ್ನಾಗಿ ಮಾಡಿ ಕೃಷಿ ಸಂಸ್ಕೃತಿಯನ್ನು ಜನರಲ್ಲಿ ಬೆಳೆಸಬೇಕು. ರಾಸಾಯನಿಕ ಮುಕ್ತ ಆಹಾರವು ಎಲ್ಲರಿಗೂ ದೊರಕುವಂತೆ ಮಾಡಬೇಕು ಎಂದು ತಿಳಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ವಿನೋದ್ ಅವರು, ರಾಷ್ಟ್ರದ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಅಪಾರ. ಕೃಷಿ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ರೀತಿಯ ಸಾಲ ಸೌಲಭ್ಯಗಳನ್ನು ಒದಗಿಸುತ್ತಿವೆ. ಅದರ ಬಗ್ಗೆ ಸರಿಯಾದ ತಿಳವಳಿಕೆ ಹೊಂದುವಂತೆ ರೈತರಲ್ಲಿ ಕೋರಿದರು.
ಯಾವುದೇ ರೈತರು ಸಂಕಷ್ಟದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗದೆ ಆರ್ಥಿಕ ಶಿಸ್ತನ್ನು ರೂಪಿಸಿಕೊಂಡು, ಬದುಕಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪಶುವೈದ್ಯಾಧಿಕಾರಿ ಡಾ.ಬಿ.ಎನ್.ಷಡಕ್ಷರಿ ಮೂರ್ತಿ, ಮಿಶ್ರ ಬೇಸಾಯ ಪದ್ಧತಿಯು ಒಂದು ಆಧುನಿಕ ಕೃಷಿ ಪದ್ಧತಿಯಾಗಿದ್ದು, ಇದರಲ್ಲಿ ಹೈನುಗಾರಿಕೆಯು ಒಂದಾಗಿದೆ. ಆರ್ಥಿಕ ಸ್ವಾವಲಂಬನೆಯ ದೃಷ್ಟಿಯಲ್ಲಿ ರೈತರಿಗೆ ಬಹಳ ಸಹಕಾರಿ ಎಂದರು.
ಗಿರ್, ಸಿಂದಿ, ರತಿ, ಹಳ್ಳಿಕಾರ್ ಮುಂತಾದವುಗಳು ಪ್ರಮುಖ ಹಸು ತಳಿಗಳಾಗಿದ್ದು, ಸ್ಥಳೀಯವಾಗಿ ದೊರೆಯುವ ತಳಿಗಳನ್ನು ಸಾಕುವುದು ಉತ್ತಮ. ಹೈನುಗಾರಿಕೆಯಿಂದ ಕೃಷಿ ಭೂಮಿಗೆ ಉತ್ತಮ ಸಾವಯವ ಗೊಬ್ಬರ ಹಾಗೂ ಜನರಿಗೆ ಪೋಷಕಯುಕ್ತವಾದ ಆಹಾರ ದೊರೆಯುತ್ತದೆ ಎಂದು ತಿಳಿಸಿದರು.
ರಾಜ್ಯದ ನಾನಾ ಭಾಗದಿಂದ ಆಗಮಿಸಿದ್ದ ಶಿಬಿರಾರ್ಥಿಗಳಿಗೆ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ, ಗುರುಪರಂಪರೆ ಅನಿಮೇಷನ್ ಚಲನಚಿತ್ರ ವೀಕ್ಷಣೆ ಆಯೋಜಿಸಲಾಗಿತ್ತು. ಅಲ್ಲದೆ ದೇಸಿ ಆಟಗಳನ್ನು ಉತ್ಸಾಹದಿಂದ ಆಡಿದರು. ಮೂಲ ಶ್ರೀಮಠ, ಶ್ರೀಮಹದೇಶ್ವರರು ರಾಗಿ ಬೀಸಿದ ಕಲ್ಲು ಹಾಗೂ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನಗಳ ದರ್ಶನ ಪಡೆದರು.
ಕಪಿಲಾ ನದಿ ತೀರದಲ್ಲಿ ಪ್ರಾರ್ಥನೆ ಹಾಗೂ ಕಪಿಲಾರತಿ ಕಾರ್ಯಕ್ರಮದಲ್ಲಿ ಶ್ರದ್ಧಾ ಭಕ್ತಿಗಳಿಂದ ಪಾಲ್ಗೊಂಡರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.