ವಿಜಯಪುರ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ತೀವ್ರ ಖಂಡನೀಯವಾಗಿದ್ದು, ಕೂಡಲೇ ಉಗ್ರರನ್ನು ಮಟ್ಟ ಹಾಕಬೇಕೆಂದು ಹಿಂದು ಜನ ಜಾಗೃತಿ ಸಮಿತಿ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದರು.
ಸಮಿತಿಯ ಜಿಲ್ಲಾ ಸಮನ್ವಯಕ ಧೃವ ಕುಲಕರ್ಣಿ ಮಾತನಾಡಿ, ಉಗ್ರರ ದಾಳಿಯಲ್ಲಿ 26 ಹಿಂದು ಪ್ರವಾಸಿಗರು ಹತ್ಯೆಯಾಗಿದ್ದಾರೆ. ಕೇವಲ ಹಿಂದುಗಳೆಂಬ ಕಾರಣಕ್ಕಾಗಿಯೇ ಅವರನ್ನು ಹತ್ಯೆ ಮಾಡಲಾಗಿದೆ. ಈ ಘಟನೆ ಭಯೋತ್ಪಾದಕರ ಕ್ರೂರತೆಯನ್ನು ತೋರಿಸುತ್ತಿದ್ದು, ಭಾರತದ ಸಾರ್ವಭೌಮ ಮತ್ತು ವಿಶೇಷವಾಗಿ ಹಿಂದು ಸಮಾಜದ ಮೇಲಿನ ನೇರ ಹಲ್ಲೆಯಾಗಿದೆ ಎಂದರು.
ಧರ್ಮ ಕೇಳಿ ಹಿಂದು ಪ್ರವಾಸಿಗರನ್ನು ಗುರಿ ಮಾಡಿ ಹತ್ಯೆಗೊಳಿಸುತ್ತಿರುವ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಡೀ ದೇಶದಲ್ಲಿ ಆಕ್ರೋಶದ ಅಲೆ ಹರಡಿಸಿದೆ. ಈ ಘಟನೆ ಸಾಮಾನ್ಯ ಹಿಂಸಾಚಾರವಲ್ಲ, ಬದಲಾಗಿ ನಿಶ್ಚಿತವಾಗಿ ಷಡ್ಯಂತ್ರ್ಯದ ಜಿಹಾದಿ ಭಯೋತ್ಪಾದನೆಯ ಉದಾಹರಣೆಯಾಗಿದೆ. ಇದು ಭಾರತದ ಏಕತೆಯ ವಿರುದ್ಧ ಮತ್ತು ಹಿಂದು ಸಮಾಜದ ವಿರುದ್ಧ ನಡೆಸಿದ ಷಡ್ಯಂತ್ರದ ಭಾಗವಾಗಿದೆ ಎಂದರು.
ಕಳೆದ ಕೆಲವು ವರ್ಷಗಳಲ್ಲಿ ಕಾಶ್ಮೀರದಲ್ಲಿ ಹಿಂದು ವ್ಯಾಪಾರಿಗಳು, ನೌಕರರು ಮತ್ತು ಕಾಶ್ಮೀರಿ ಪಂಡಿತರ ಮೇಲೆ ಸತತವಾಗಿ ದಾಳಿಗಳು ನಡೆಯುತ್ತಿವೆ. ಕೇಂದ್ರ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತೀಯ ಸಂವಿಧಾನ ಅಡಿಯಲ್ಲಿ ತಂದಿದ್ದು, ಚುನಾವಣೆಗಳನ್ನು ನಡೆಸಿದ್ದು, ಅಭಿವೃದ್ಧಿ ಪ್ರಯತ್ನಗಳನ್ನು ಮಾಡಿದ್ದು ಕಂಡಿದ್ದೇವೆ; ಆದರೆ ಇನ್ನೂ ಉಗ್ರ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಹಿಡಿಯುವಲ್ಲಿ ಪೂರ್ಣ ಯಶಸ್ಸು ದೊರಕಿಲ್ಲ. ಹೀಗಾಗಿ ಪ್ರಧಾನಿ ಮೋದಿ ಅವರು ಕೂಡಲೇ ಭಯೋತ್ಪಾದನೆ ಹತ್ತಿಕ್ಕಲು ಕಠಿಣ ಕ್ರಮ ಜರುಗಿಸಬೇಕೆಂದರು.
ಸಂಘಟನೆಯ ಪ್ರಮುಖರಾದ ಚೇತನ ವಾಟರಕರ, ಜಯಂತ ಮುತ್ತಗಿಕರ ಹಾಗೂ ಚಂದ್ರಕಲಾ ವಿಭೂತಿಮಠ ಇದ್ದರು.