ಕುಶಾಲನಗರರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಶಶಿಧರ್, ಮಂಜುನಾಥ್ ಗುಂಡೂರಾವ್, ಜೋಸೆಫ್ ವಿಕ್ಟರ್ ಸೋನ್ಸ್, ನಂಜುಂಡಸ್ವಾಮಿ ಇತರರು ಹಾಜರಿದ್ದರು. 
ಜಿಲ್ಲೆ

ಮತಾಂಧ ಶಕ್ತಿಗಳ ವಿರುದ್ಧ ಕಠಿಣ ಕ್ರಮ ವಹಿಸಿ

ಅಭಿನಯ್ ಎಚ್.ಎಂ

ಕುಶಾಲನಗರ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಸರ್ವ ಧರ್ಮೀಯರು ಪಾಲ್ಗೊಂಡು ಸಾಮರಸ್ಯದ ಘೋಷಣೆ ಮೊಳಗಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆ ಸಂಚಾರ ತಡೆದು ಮತಾಂಧ ಶಕ್ತಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ರಜಾಕ್ ಮಾತನಾಡಿ, ಎಲ್ಲಾ ಧರ್ಮದವರನ್ನು ಒಳಗೊಂಡ ಕಾಂಗ್ರೆಸ್ ಸಹಜವಾಗಿ ಯಾವುದೇ ಧರ್ಮೀಯರಿಗೆ ಅನ್ಯಾಯವಾದಾಗ ದನಿ ಎತ್ತಲಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿರುವುದು ಖಂಡನೀಯ ಎಂದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಹಿಂದು ಸಾಮ್ರಾಜ್ಯದ ಸಾಮ್ರಾಟ ಎಂದು ಕರೆಸಿಕೊಳ್ಳುವ ಪ್ರಧಾನಿ ಮೋದಿ ಪಕ್ಕದ ರಾಷ್ಟ್ರದಲ್ಲಿ ಹಿಂದುಗಳಿಗೆ ಉಂಟಾಗುತ್ತಿರುವ ಅನಾಯ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.

ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ವಕೀಲ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿದರು. ಪ್ರತಿಭಟನೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸದಸ್ಯ ಶಾಜಿ, ಪುರಸಭಾ ಸದಸ್ಯರಾದ ದಿನೇಶ್, ಶಿವಶಂಕರ್, ನವೀನ್‌ಗೌಡ, ಹರೀಶ್, ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಸುನೀತಾ, ಕೃಷ್ಣೇಗೌಡ, ಜಗದೀಶ್, ಶಿವಕುಮಾರ್, ಮೈಸಿ ಕತ್ತಣ್ಣಿರ ಮತ್ತಿತರರು ಹಾಜರಿದ್ದರು.