ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಧಾರಾಕಾರ ಮಳೆಗೆ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ರಾತ್ರಿಯೀಡಿ ಜಾಗರಣೆ ಮಾಡಿದ ನಗರದ ವಿವಿಧೆಡೆಯ ನಿವಾಸಿಗಳು ಗುರುವಾರ ಬೆಳಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.
ಇಲ್ಲಿಯ ಜಗದೀಶ ನಗರ ಕೇತೇಶ್ವರ ಕಾಲನಿ ನಿವಾಸಿಗಳು ಆರ್.ಎನ್. ಶೆಟ್ಟಿ ರಸ್ತೆಯಲ್ಲಿ ಹಾಗೂ ಹಳೇ ಹುಬ್ಬಳ್ಳಿ ಮ್ಯಾದರ ಓಣಿ ನಿವಾಸಿಗಳು ಹಳೇ ಹುಬ್ಬಳ್ಳಿ ಸೇತುವೆ ಬಳಿ ರಸ್ತೆ ಸಂಚಾರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಮನೆಯೊಳಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬುಧವಾರ ರಾತ್ರಿ ಸುರಿದ ಮಳೆಗೆ ಗಣೇಶನಗರ, ಜಗದೀಶನಗರ, ಕೇತೇಶ್ವರ ಕಾಲನಿಯ ಸುಮಾರು 100ಕ್ಕೂ ಮನೆಗಳಿಗೆ ನೀರು ನುಗ್ಗಿದ್ದವು. ಗಣೇಶ ನಗರದಲ್ಲಿ ತಕ್ಕ ಮಟ್ಟಿಗೆ ಗಟಾರ ವ್ಯವಸ್ಥೆ ಇದೆ. ಜಗದೀಶ ನಗರ, ಕೇತೇಶ್ವರ ಕಾಲನಿಯಲ್ಲಿ ಗಟಾರವೇ ಇಲ್ಲ. ಮಳೆ ನೀರು ಹರಿದು ಹೋಗಲು ಅವಕಾಶವೇ ಇಲ್ಲ. ಮೇಲಾಗಿ ಸಮೀಪದ ನಾಲಾ ತುಂಬಿ ಮನೆಗಳಿಗೆ ನೀರು ನುಗ್ಗಿವೆ. ಗಟಾರ ನಿರ್ಮಾಣ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಟೈರ್ ಸುಟ್ಟು ರಸ್ತೆ ಸಂಚಾರ ತಡೆ ನಡೆಸಿದ್ದರು. ಉಪ ಮೇಯರ್ ದುರ್ಗಪ್ಪ ಬಿಜವಾಡ, ಪಾಲಿಕೆ ಸದಸ್ಯ ಚೇತನ ಹಿರೇಕೆರೂರ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎನ್. ಗಣಾಚಾರಿ, ಸಹಾಯಕ ಆಯುಕ್ತ ಮಾಲಿಮಾಟೀಲ ಸ್ಥಳಕ್ಕೆ ಭೇಟಿ ನೀಡಿದ್ದರು.
ನಾಲಾ ಹಾಗೂ ಗಟಾರ ಹೂಳೆತ್ತಲು ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರು ಭರವಸೆ ನೀಡಿದರು.
ನಾಲಾ ತಡೆಗೋಡೆ ಎತ್ತರಿಸಿ
ಹಳೇ ಹುಬ್ಬಳ್ಳಿ ಸೇತುವೆ ಬಳಿಯ ಮೇದಾರ ಓಣಿ ಹಾಗೂ ಸುತ್ತಮುತ್ತಲಿನ ತಗ್ಗು ಪ್ರದೇಶದ ನಿವಾಸಿಗಳು ನಾಲಾ ತಡೆಗೋಡೆ ಎತ್ತರಿಸಬೇಕೆಂದು ಆಗ್ರಹಿಸಿ ರಸ್ತೆ ಸಂಚಾರ ತಡೆ ನಡೆಸಿದರು.
ನಾಲಾ ತುಂಬಿ ರಸ್ತೆ ಪಕ್ಕ ಮೇದಾರ ಓಣಿಯ ಮನೆಗಳಿಗೆ ನೀರು ನುಗ್ಗಿದ್ದವು. ನೀರಿನೊಂದಿಗೆ ಪ್ಲಾಸ್ಟಿಕ್, ಕಸ, ಹೊಲಸು ಎಲ್ಲವೂ ಮನೆಯೊಳಗೆ ನುಗ್ಗಿ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದ್ದರು.
‘ಮನೆಯೊಳಗೆ ನೀರು ನುಗ್ಗಿ ರಾತ್ರಿಯಿಂದ ಬೆಳಗ್ಗೆಯಿಂದ ನಿದ್ರೆ ಮನೆ ಮಂದಿಯೆಲ್ಲ ಮಾಡಿಲ್ಲ. ನಾವು ಪರಿಹಾರ ಕೇಳುತ್ತಿಲ್ಲ. ನಾಲಾ ತಡೆಗೋಡೆ ಎತ್ತರ ಕಡಿಮೆ ಇದೆ. ತಡೆಗೋಡೆಯ ಎತ್ತರ ಹೆಚ್ಚಿಸಬೇಕು. ನಾಲಾ ಹೊಳೆತ್ತಬೇಕು’ ಎಂದು ಮಂಜವ್ವ ಕಂಬಾರ, ಇತರರು ಆಗ್ರಹಿಸಿದರು.