ಕುಶಾಲನಗರದಲ್ಲಿ ಕುಡಿವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿ ನಿಯೋಗ ಸ್ಥಳೀಯ ಜಲಮಂಡಳಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿತು. ಎಂ.ಎಂ. ಚರಣ್, ಮಧುಸೂದನ್, ಜೈವರ್ಧನ, ಬಿ. ಅಮೃತ್‌ರಾಜು ಕೆ.ಜಿ.ಮನು, ಕೃಷ್ಣಪ್ರಸಾದ್, ಶಿವಾಜಿ, ವೈಶಾಕ್, ಪ್ರವೀಣ್ ಇದ್ದರು. 
ಜಿಲ್ಲೆ

ಕುಡಿವ ನೀರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಿ

ರವಿಕುಮಾರ್ ಪಿ. ಕೆ

ಕುಶಾಲನಗರ: ಕುಶಾಲನಗರ ನಿವಾಸಿಗಳಿಗೆ ಕುಡಿವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಜಲಮಂಡಳಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುಶಾಲನಗರ ನಗರ ಬಿಜೆಪಿ ನಿಯೋಗ ಸ್ಥಳೀಯ ಜಲಮಂಡಳಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿತು.

ನಗರ ಬಿಜೆಪಿ ಅಧ್ಯಕ್ಷ ಎಂ.ಎಂ. ಚರಣ್ ನೇತೃತ್ವದ ನಿಯೋಗ ಜಲಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನಕುಮಾರ್ ಹಾಗೂ ಸಹಾಯಕ ಅಭಿಯಂತರ ಬಿಪಿನ್ ಅವರಲ್ಲಿ ಕುಡಿವ ನೀರಿನ ಪರ್ಯಾಯ ವ್ಯವಸ್ಥೆಗಳ ಕುರಿತು ಪರಾಮರ್ಶೆ ನಡೆಸಿತು.

ಈ ವೇಳೆ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಎಂ.ಎಂ. ಚರಣ್, ಕುಶಾಲನಗರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ವಾಸವಿರುವ ಬಡ, ನಿರ್ಗತಿಕ ಹಾಗೂ ಅಮಾಯಕ ಮಂದಿಗೆ ಕುಡಿವ ನೀರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜಲಮಂಡಳಿಯ ಟ್ಯಾಂಕರ್‌ಗಳಿಂದ ಪೂರೈಸುವ ಕುಡಿವ ನೀರಿಗೆ ಜನಸಾಮಾನ್ಯರಿಂದ ಯಾವುದೇ ಹಣ ಪಡೆಯದೇ ಉಚಿತವಾಗಿ ಪೂರೈಸಬೇಕು. ಜಲಮಂಡಳಿಯ ಟ್ಯಾಂಕರ್‌ಗಳಿಂದ ಪೂರೈಸುವ ನೀರಿನ ಬಗ್ಗೆ ಬಡಾವಣೆಗಳ ನಿವಾಸಿಗಳಿಗೆ ಮುಂಗಡವಾಗಿ ಮಾಹಿತಿ ನೀಡಬೇಕು. ಬೇಸಿಗೆ ಮುಗಿದು ಕಾವೇರಿ ನದಿಯಲ್ಲಿ ನೀರು ಸರಾಗವಾಗಿ ಹರಿಯುವವರೆಗೂ ಜಲಮಂಡಳಿ ಅಧಿಕಾರಿಗಳು ಕುಶಾಲನಗರದ ಜನತೆಗೆ ಪರಿಪೂರ್ಣ ಪ್ರಮಾಣದಲ್ಲಿ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ಕುಶಾಲನಗರದ ಜನತೆಗೆ ಕುಡಿವ ನೀರಿಗೆ ಸಮಸ್ಯೆ ಕಾಡದಂತೆ ಶಾಶ್ವತ ಯೋಜನೆ ರೂಪಿಸಬೇಕಿದೆ.

ಕುಶಾಲನಗರದ ಕಾವೇರಿ ನದಿಯ ಜಾಕ್‌ವೆಲ್ ಬಳಿ ನದಿಗೆ ಅಡ್ಡಲಾಗಿ ಕಟ್ಟೆಕಟ್ಟುವ ಮೂಲಕ ಬೇಸಿಗೆಯಲ್ಲಿ ನೀರಿನ ಸಂಗ್ರಹ ನಿರ್ವಹಣೆ ಮಾಡುವ ಯೋಜನೆ ರೂಪಿಸಬೇಕಿದೆ. ತಾತ್ಕಾಲಿಕವಾಗಿ ಜಾಕ್‌ವೆಲ್ ಬಳಿ ಮರಳು ಚೀಲಗಳನ್ನು ಜೋಡಿಸಿ ನೀರು ಸಂಗ್ರಹಿಸಬೇಕು. ನೀರು ಸ್ಥಗಿತಗೊಂಡ ಅವಧಿಯ ನೀರಿನ ಕರವನ್ನು ಸಾರ್ವಜನಿಕರಿಂದ ಸಂಗ್ರಹಿಸದೇ ಸರ್ಕಾರಕ್ಕೆ ಪತ್ರ ಬರೆದು ಸರ್ಕಾರದಿಂದಲೇ ಅಗತ್ಯವಾದ ಅನುದಾನ ಪಡೆದುಕೊಳ್ಳಲಿ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಜೈವರ್ಧನ ಮಾತನಾಡಿ, ಚಿಕ್ಲಿಹೊಳೆಯಲ್ಲಿ ಲಭ್ಯವಿರುವ ನೀರನ್ನು ಕಾವೇರಿ ನದಿಗೆ ಹರಿಸಿ ಸದ್ಯದ ಪರಿಸ್ಥಿತಿಯಲ್ಲಿ ಕುಶಾಲನಗರಕ್ಕೆ ಎದುರಾಗಿರುವ ಕುಡಿವ ನೀರಿನ ಬವಣೆಯನ್ನು ನೀಗಿಸಿಕೊಳ್ಳುವ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಾತನಾಡಿ, ಜಲಮಂಡಳಿ ಕಳೆದ ವರ್ಷ ವಿತರಿಸಿದ ನೀರಿಗೆ ಸಾರ್ವಜನಿಕರಿಂದ ಅಲ್ಲಲ್ಲಿ ಹಣ ಪಡೆದ ದೂರುಗಳಿದ್ದವು. ಈ ಬಾರಿ ಹಾಗಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ನದಿಯಲ್ಲಿ ಕೃಷಿ ಬಳಕೆಗೆ ನೀರನ್ನು ಬಳಸದೇ ಕೇವಲ ಕುಡಿವ ನೀರಿಗೆ ಆದ್ಯತೆ ಕೊಡುವಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಲಮಂಡಳಿ ಎಇಇ ಪ್ರಸನ್ನ ಕುಮಾರ್, ಜಲಮಂಡಳಿಯಿಂದ ಜನಸಾಮಾನ್ಯರಿಗೆ ಉಚಿತವಾಗಿ ಕುಡಿವ ನೀರು ಪೂರೈಸಲು ಮೂರು ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಪಟ್ಟಣದ ಐದು ಕಡೆಗಳಲ್ಲಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದ್ದು ಅಲ್ಲಿಂದ ಟ್ಯಾಂಕರ್‌ಗಳಿಗೆ ತುಂಬಿಸಿ ನೀರು ಪೂರೈಸಲಾಗುವುದು. ಮಳೆ ಬಂದು ನದಿಯಲ್ಲಿ ನೀರು ಹರಿದು ಬರುವವರೆಗೂ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕಿದೆ. ಪುರಸಭೆಯ ವತಿಯಿಂದ ನೀರು ಪೂರೈಕೆ ಮಾಡುತ್ತಿರುವ ಪ್ರದೇಶಗಳ ಜವಾಬ್ದಾರಿ ಅವರೇ ನಿರ್ವಹಿಸಬೇಕು. ಜಲಮಂಡಳಿಯಿಂದ ವಿತರಿಸುವ ನೀರಿನ ಮಾರ್ಗದ ನಿವಾಸಿಗಳಿಗೆ ಕುಡಿವ ನೀರಿಗೆ ಸಮಸ್ಯೆ ಕಂಡುಬಂದಲ್ಲಿ ನೇರವಾಗಿ ಜಲಮಂಡಳಿಯ ಸಹಾಯಕ ಇಂಜಿನಿಯರ್ ಬಿಪಿನ್ ಅವರ 89701 23669 ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಪ್ರಸನ್ನಕುಮಾರ್ ತಿಳಿಸಿದರು.

ನಿಯೋಗದಲ್ಲಿ ಬಿಜೆಪಿ ಪ್ರಮುಖರಾದ ಪುರಸಭಾ ಸದಸ್ಯ ಬಿ. ಅಮೃತ್‌ರಾಜು ಕೆ.ಜಿ.ಮನು, ಕೃಷ್ಣಪ್ರಸಾದ್, ಶಿವಾಜಿ, ವೈಶಾಕ್, ಪ್ರವೀಣ್ ಇದ್ದರು.