ಹುಣಸೂರು: ದಲಿತ ಮತ್ತು ಇತರ ಬಡವಿದ್ಯಾರ್ಥಿಗಳಿಗೆ ಅನುಕೂಲವಾಗಲು ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಗಳ ಸ್ಥಾಪನೆ, ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘಟನೆಗಳಿಂದ ಶಾಸಕ ಜಿ.ಡಿ.ಹರೀಶ್‌ಗೌಡರಿಗೆ ಮನವಿ ಸಲ್ಲಿಸಲಾಯಿತು.\
ಗುರುವಾರ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, 20 ವರ್ಷಗಳಿಂದಲೂ ಹುಣಸೂರು ನಗರದ ಪ್ರಮುಖ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡುವಂತೆ ಮನವಿ ಮಾಡುತ್ತಾ ಬರುತ್ತಿದ್ದು, ನಮ್ಮ ಮನವಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷೃ ವಹಿಸಿದ್ದಾರೆ. ಅಂಬೇಡ್ಕರ್ ಒಂದು ಜಾತಿ, ಧರ್ಮಕ್ಕೆ ಸೀಮಿತ ನಾಯಕರಲ್ಲ. ಬದಲಾಗಿ ಅವರು ಎಲ್ಲ ತಳ ಸಮುದಾಯಗಳಿಗೆ ಸಮಾನತೆಯ ಹಕ್ಕು ಮತ್ತು ಬದುಕುವ ಅವಕಾಶಗಳನ್ನು ಕಲ್ಪಿಸಿಕೊಟ್ಟ ಮಹಾನ್ ನಾಯಕ. ಹುಣಸೂರು ನಗರದ ಸಂವಿಧಾನ ವೃತ್ತದ ಪಕ್ಕದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಬೇಕು. ದಲಿತರು ಹಾಗೂ ಇತರ ಎಲ್ಲ ಜಾತಿಯ ವಿದ್ಯಾವಂತ ಯುವಕ ಯುವತಿಯರಿಗೆ ಹುಣಸೂರಿನಲ್ಲಿ ಐಎಎಸ್, ಕೆಎಎಸ್ ಇತರ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರ ಪ್ರಾರಂಭ ಮಾಡಬೇಕು. ಸರ್ಕಾರದ ವತಿಯಿಂದ ನರ್ಸಿಂಗ್ ಕಾಲೇಜನ್ನು ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿದರು.
ಅಸ್ಪಶ್ಯತೆ, ಜಾತೀಯತೆ, ಅಸಮಾನತೆ ಇಂದಿಗೂ ಕೆಲ ಗ್ರಾಮಗಳಲ್ಲಿ ಜೀವಂತವಾಗಿದೆ. ಇದರಿಂದ ದಲಿತ ಸಮಾಜವು ಬಹಳ ನೋವಿನಲ್ಲಿ ಬದುಕುವ ಸ್ಥಿತಿ ಇದೆ. ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ತಾಲೂಕು ಆಡಳಿತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಶಾಸಕ ಜಿ.ಡಿ. ಹರೀಶ್‌ಗೌಡ ಮಾತನಾಡಿ, ಹುಣಸೂರು ನಗರದ ಸಂವಿಧಾನ ವೃತ್ತದ ಪಕ್ಕದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಲು ಈಗಾಗಲೇ ಹುಣಸೂರು ನಗರಸಭೆಯ ನಡಾವಳಿ ಮಾಡಲಾಗಿದ್ದು, ಸದರಿ ನಡಾವಳಿಯಂತೆ ಸರ್ಕಾರದ ಮಟ್ಟದಲ್ಲಿ ಪ್ರತಿಮೆ ಎಷ್ಟು ಜಾಗ ಬೇಕು ಎನ್ನುವುದನ್ನು ಖಾತ್ರಿಪಡಿಸಿಕೊಂಡು ಮಂಜೂರು ಮಾಡಿಸಿ ಪ್ರತಿಮೆ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳುತ್ತೇನೆ. ಐಎಎಸ್, ಕೆಎಎಸ್ ತರಬೇತಿ ಕೇಂದ್ರ ಮತ್ತು ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಉಪವಿಭಾಗಾಧಿಕಾರಿ ಎಚ್.ಬಿ.ವಿಜಯ್‌ಕುಮಾರ್, ತಹಸೀಲ್ದಾರ್ ಜೆ.ಮಂಜುನಾಥ್, ಸಮಾಜ ಕಲ್ಯಾಣಾಧಿಕಾರಿ ಅಶೋಕ್‌ಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಹೊಂಗಯ್ಯ, ದಲಿತ ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ಕಿರಂಗೂರು ಸ್ವಾಮಿ, ಆದಿಜಾಂಬವ ಸಂಘದ ಡಿ.ಕುಮಾರ್, ಹಿರಿಯ ದಲಿತ ಮುಖಂಡ ಬಸವಲಿಂಗಯ್ಯ ಮುಂತಾದವರು ಇದ್ದರು.