ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಎಡಿಸಿ ಸೋಮಲಿಂಗ ಗೆಣ್ಣೂರ ಸಭೆ ನಡೆಸಿದರು. ಎಎಸ್‌ಪಿ ಶಂಕರ ಮಾರಿಹಾಳ ಇದ್ದಾರೆ. 
ಜಿಲ್ಲೆ

ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಿ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಹಾಗೂ ಗ್ರೂಪ್ ಬಿ ವೃಂದದ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಹಾಗೂ ಗ್ರೂಪ್ ಬಿ ವೃಂದದ ಪರೀಕ್ಷೆಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಡಳಿತ ಅಧಿಕಾರಿಗಳು ರೂಪುಗೊಳ್ಳುವ ಪರೀಕ್ಷೆ ಇದಾಗಿದ್ದು, ಅತ್ಯಂತ ಎಚ್ಚರಿಕೆ, ಸೂಕ್ಷ್ಮವಾಗಿ ಪಾರದರ್ಶಕತೆಯಿಂದ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.

32 ಕೇಂದ್ರಗಳ ಸ್ಥಾಪನೆ

ಡಿ.29ರಂದು 32 ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಯಲ್ಲಿ ಒಟ್ಟು 12741 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಒಂದನೇ ಅಧಿವೇಶನ ಮಧ್ಯಾಹ್ನ 2ರಿಂದ 4ರವರೆಗೆ ಎರಡನೇ ಅವಧಿವೇಶನ ಪರೀಕ್ಷೆಗಳು ಜರುಗಲಿವೆ. ಅಭ್ಯರ್ಥಿಗಳು ಪರೀಕ್ಷಾ ದಿನಗಳಂದು ಬೆಳಗಿನ ಹಾಗೂ ಮಧ್ಯಾಹ್ನದ ಅಧಿವೇಶನಗಳ ಪರೀಕ್ಷೆ ಪ್ರಾರಂಭವಾಗುವ 2 ಗಂಟೆ ಮೊದಲು ಕಡ್ಡಾಯವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದೆಂದು ಅವರು ವಿವರಿಸಿದರು.

ಪರೀಕ್ಷಾ ಕೇಂದ್ರಗಳಿಗೆ ಉಪಕೇಂದ್ರಗಳ ಮೇಲ್ವಿಚಾರಣೆಗೆ ಓರ್ವ ಎ ಹಾಗೂ ಬಿ ದರ್ಜೆ ಅಧಿಕಾರಿಯನ್ನು ನೇಮಿಸುವುದು, ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಕೊಂಡೊಯ್ಯಲು ಮಾರ್ಗಾಧಿಕಾರಿಯನ್ನು ನೇಮಿಸಿ ಅವರಿಗೆ ಬೆಂಗಾವಲು ಕಾರ್ಯಕ್ಕಾಗಿ ಓರ್ವ ಸಶಸ್ತ್ರ ಪೊಲೀಸ್ ಸಿಬ್ಬಂದಿ, ಗ್ರೂಪ್-ಡಿ ಸಿಬ್ಬಂದಿ, ವಾಹನದ ವ್ಯವಸ್ಥೆಗೆ ಅವರು ಸೂಚನೆ ನೀಡಿದರು.

ಕಟ್ಟುನಿಟ್ಟಿನ ತಪಾಸಣೆ

ಅಭ್ಯರ್ಥಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೊಳಪಡಿಸಬೇಕು. ಅಭ್ಯರ್ಥಿಗಳು ಯಾವುದೇ ಇಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಫೋನ್ ಇನ್ನಿತರ ಉಪಕರಣ ಬಳಸದಿರುವ ಬಗ್ಗೆ ತಪಾಸಣೆ ನಡೆಸಬೇಕು. ಪರೀಕ್ಷೆ ಹಿಂದಿನ ದಿನ ಸಿಸಿಟಿವಿ ಕ್ಯಾಮರಾ, ಬಾಡಿ ಕ್ಯಾಮರಾ, ಪ್ರಿಸ್ಕಿಂಗ್, ಮುಖ ಚಹರೆ ಮತ್ತು ಜಾಮರ್‌ಗಳನ್ನು ಉಪ ಪರೀಕ್ಷಾ ಕೇಂದ್ರದ ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸುವುದು, ಪರೀಕ್ಷಾ ದಿನದಂದು ಅವುಗಳು ಕಾರ್ಯನಿರ್ವಹಿಸುತ್ತಿರುವ ಕುರಿತು ಪರಿಶೀಲಿಸಬೇಕು. ಪರೀಕ್ಷೆ ಶುರುವಾಗುವ ಅರ್ಧಗಂಟೆ ಮುಂಚೆ ಜಾಮರ್ ಆನ್ ಮಾಡುವುದು, ಪರೀಕ್ಷೆ ಮುಗಿದ ಅರ್ಧ ಗಂಟೆ ನಂತರ ಬಂದ್ ಮಾಡುವುದು, ಎಲ್ಲ ಸಿಸಿಟಿವಿ ಕ್ಯಾಮರಾ ವೀಕ್ಷಣೆಗೆ ಅನುಕೂಲವಾಗುವಂತೆ ದೃಶ್ಯಾವಳಿ ವೀಕ್ಷಿಸಲು ಮಾನಿಟರ್ ಅಳವಡಿಸಿ ವೆಬ್ ಕಾಸ್ಟಿಂಗ್ ಮಾಡಬೇಕು. ಪರೀಕ್ಷೆ ಕೊಠಡಿಗಳಲ್ಲಿ ಸಾಕಷ್ಟು ಗಾಳಿ, ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಸೇರಿ ಅಗತ್ಯ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಅಭ್ಯರ್ಥಿ ಮಧ್ಯೆ 2 ಮೀಟರ್ ಅಂತರವಿರಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಪರೀಕ್ಷೆ ಕೊಠಡಿಗಳಿಗೆ ತೆರಳಲು ಅನುಕೂಲವಾಗುವಂತೆ ವೀಲ್‌ಚೇರ್-ಇಳಿಜಾರು ಸೌಲಭ್ಯ ಒದಗಿಸಬೇಕು. ಹಿಯರಿಂಗ್ ಏಯ್ಡ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಅಭ್ಯರ್ಥಿಗಳ ಗುರುತಿನ ಚೀಟಿ ತಪಾಸಣೆ ನಡೆಸಿ ಖಚಿತಪಡಿಸಿಕೊಳ್ಳಬೇಕು. ಮಹಿಳಾ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ತಪಾಸಣೆ ನಡೆಸಬೇಕು. ಮೊಬೈಲ್, ಕ್ಯಾಲಕುಲೇಟರ್ ಸೇರಿ ಯಾವುದೇ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸದಂತೆ ನೋಡಿಕೊಳ್ಳಬೇಕು. ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಎಎಸ್‌ಪಿ ಶಂಕರ ಮಾರಿಹಾಳ ಮಾತನಾಡಿ, ಪರೀಕ್ಷಾ ದಿನದಂದು ಪರೀಕ್ಷೆಗಳು ಸುಗಮವಾಗಿ ನಡೆಯಲು ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಸಿ.ಕೆ. ಹೊಸಮನಿ ಮತ್ತಿತರರಿದ್ದರು.