ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪೂರ್ವಭಾವಿ ಸಭೆ ನಡೆಸಿದರು. ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಇದ್ದಾರೆ.  
ಜಿಲ್ಲೆ

ಪಿಎಸ್‌ಐ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಿ; ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

ವಿಜಯಪುರ: ಜಿಲ್ಲೆಯ ಒಟ್ಟು 11 ಕೇಂದ್ರಗಳಲ್ಲಿ ಅ.3ರಂದು ನಡೆಯಲಿರುವ ಪಿಎಸ್‌ಐ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಟ್ಟು 4,920 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಗ್ಗೆ 10.30ರಿಂದ 12ರವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 12.30ರಿಂದ ಮಧ್ಯಾಹ್ನ 2 ರವರೆಗೆ ಪತ್ರಿಕೆ-2ರ ಪರೀಕ್ಷೆಗಳು ನಡೆಯಲಿವೆ.

ಅಭ್ಯರ್ಥಿಗಳು ಯಾವುದೇ ಇಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಫೋನ ಇನ್ನಿತರ ಉಪಕರಣ ಬಳಸದಿರುವ ಬಗ್ಗೆ ತಪಾಸಣೆ ನಡೆಸಬೇಕು. ಪರೀಕ್ಷಾ ಹಿಂದಿನ ದಿನ ಸಿಸಿಟಿವಿ ಕ್ಯಾಮೆರಾ, ಬಾಡಿ ಕ್ಯಾಮೆರಾ, ಪ್ರಿಸ್ಕಿಂಗ್, ಮುಖ ಚಹರೆ ಮತ್ತು ಜಾಮರ್‌ಗಳನ್ನು ಉಪ ಪರೀಕ್ಷಾ ಕೇಂದ್ರದ ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸುವುದು, ಪರೀಕ್ಷಾ ದಿನದಂದು ಅವುಗಳು ಕಾರ್ಯನಿರ್ವಹಿಸುತ್ತಿರುವ ಕುರಿತು ಪರಿಶೀಲಿಸಿಕೊಳ್ಳಬೇಕು. ಎಲ್ಲ ಸಿಸಿಟಿವಿ ಕ್ಯಾಮೆರಾಗಳ ವೀಕ್ಷಣೆಗೆ ಅನುಕೂಲವಾಗುವಂತೆ ದೃಶ್ಯಾವಳಿ ವೀಕ್ಷಿಸಲು ಮಾನಿಟರ್ ಅಳವಡಿಸಿ ವೆಬ್ ಕಾಸ್ಟಿಂಗ್ ಮಾಡಬೇಕು. ಪರೀಕ್ಷಾ ಕೊಠಡಿಗಳಲ್ಲಿ ಸಾಕಷ್ಟು ಗಾಳಿ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮ ವಹಿಸಬೇಕು. ಪರೀಕ್ಷೆಗಳಲ್ಲಿ ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಲೋಪ ಕಂಡು ಬಂದಲ್ಲಿ ತಪ್ಪಿಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಯಾವುದೇ ಕಾರಣಕ್ಕೂ ತಮಗೆ ವಹಿಸಿದ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಅಭ್ಯರ್ಥಿಗಳ ಗುರುತಿನ ಚೀಟಿ ತಪಾಸಣೆ ನಡೆಸಿ ಖಚಿತಪಡಿಸಿಕೊಳ್ಳಬೇಕು. ಮಹಿಳಾ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ತಪಾಸಣೆ ನಡೆಸಬೇಕು. ಮೊಬೈಲ್, ಕ್ಯಾಲಕುಲೇಟರ್ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸದೇ ಇರುವುದು ಖಚಿತ ಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಅಧಿಕೃತವಾಗಿ ನೇಮಕವಾದ ಸಿಬ್ಬಂದಿಗೆ ಮಾತ್ರ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಹಾಗೂ ಅವರು ಗುರುತಿನ ಚೀಟಿ ಹೊಂದಿರಬೇಕು. ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಖಜಾನೆ ಇಲಾಖೆಯ ಉಪನಿರ್ದೇಶಕ ಹಣಮಂತ ಕಾಲತಿಪ್ಪಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಸಿ.ಕೆ. ಹೊಸಮನಿ ಮತ್ತಿತರರಿದ್ದರು.