ಎಚ್.ಡಿ.ಕೋಟೆ: ಗರ್ಭಿಣಿಯರ ವೈದ್ಯಕೀಯ ತಪಾಸಣೆ ಮಾಡಿಸಲು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಸೂಚನೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಪ್ರಧಾನ ಮಂತ್ರಿ ಸುರಕ್ಷಿತಾ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಂದ ಪರೀಕ್ಷಿಸಿ ಉಚಿತವಾಗಿ ರಕ್ತದ ಒತ್ತಡ, ಮಧುಮೇಹ, ತೂಕವನ್ನು ಪರೀಕ್ಷೆ ಮಾಡಿಸುವುದು, ಗರ್ಭಿಣಿಯರಲ್ಲಿ ತೊಂದರೆಗಳು ಕಂಡುಬಂದಲ್ಲಿ ಸೂಕ್ತ ಸಲಹೆ, ಚಿಕಿತ್ಸೆ ಕೊಡಿಸಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವುದು ಆರೋಗ್ಯ ಸುರಕ್ಷಾ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪೌಷ್ಟಿಕ ಆಹಾರ ಸೇವನೆ, ಸುರಕ್ಷಿತ ಹೆರಿಗೆ, ಸುರಕ್ಷಿತ ತಾಯಿತನ, ಸುರಕ್ಷಿತ ಶಿಶು ಆರೈಕೆ ಬಗ್ಗೆ ಪ್ರತಿ ತಿಂಗಳು 9ರಂದು ಮತ್ತು 24ರಂದು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉಚಿತವಾಗಿ ಅರಿವು ಮೂಡಿಸುವ ಕಾಯಕ್ರಮ ಆಯೋಜಿಸಲಾಗಿದೆ ಎಂದರು.
ತಾಯಿ, ಮರಣ ಮತ್ತು ಶಿಶು ಮರಣವನ್ನು ತಪ್ಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇತ್ತೀಚೆಗೆ ಬಾಲ್ಯ ವಿವಾಹದಿಂದ ಅಪ್ರಾಪ್ತೆಯರು ಗರ್ಭಿಣಿಯಾಗಿ ಬರುತ್ತಿದ್ದಾರೆ. ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷ ಕಡ್ಡಾಯವಾಗಿ ತುಂಬಿರಬೇಕು , ಇಲ್ಲದಿದ್ದರೆ ಅಂಥವರ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು ಮಾಡಿ ಬಂಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹದಿ ಹರೆಯದವರ ಗರ್ಭಿಣಿ ಪ್ರಕರಣಗಳು ತಾಲೂಕಿನಲ್ಲಿ ಕಂಡು ಬರುತ್ತಿವೆ. ಮುಂದೆ ಈ ಪ್ರಕರಣಗಳು ವರದಿ ಆಗಬಾರದು ಎಂದು ನಿರ್ದೇಶನ ನೀಡಿದರು.
ಸಾರ್ವಜನಿಕ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಪೂರ್ಣಿಮಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಅರಲಪ್ಪ, ರವಿರಾಜ್, ಅರ್ಚನಾ, ರಾಜು ಶಿವಕುಮಾರ್, ವಿದ್ಯಾ, ನಾಗಮ್ಮ, ರೀನಾ, ದೇವಿಂದ್ರಮ್ಮ ಇತರರು ಇದ್ದರು.