ಅನಾರೋಗ್ಯಕ್ಕೆ ಈಡಾಗಿ ಆಸ್ಪತ್ರೆಗೆ ದಾಖಲಾಗುವ ಬದಲು ಜಾಗ್ರತೆ ವಹಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ನಗರಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಹೇಳಿದರು.
ಬೆಂಗಳೂರಿನ ಕಂಪಾನಿಯೋ ಸಂಸ್ಥೆ ಹಾಗೂ ಜೆ.ಎಸ್.ಜಗದೀಶ್ ಸ್ನೇಹ ಬಳಗದ ವತಿಯಿಂದ ನಿವೇದಿತಾನಗರದ ಎಸ್.ಆರ್.ಸುಬ್ಬರಾವ್ ಉದ್ಯಾನದಲ್ಲಿ 13 ದಿನಗಳ ಕಾಲ ಆಯೋಜಿಸಿರುವ ಉಚಿತ ಆರೋಗ್ಯದ ಸುಧಾರಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಸಂಪೂರ್ಣ ಮಾಹಿತಿಯ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಚೈತನ್ಯ ಮತ್ತು ಮನಸ್ಸು ನಮ್ಮ ದೇಹದಲ್ಲಿ ಅಡಗಿವೆ. ದಿನನಿತ್ಯದ ಅವಸರದ ಕಾರ್ಯ ಚಟುವಟಿಕೆಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವುದು ಮೇಲ್ನೊಟಕ್ಕೆ ಕಂಡುಬರುವುದಿಲ್ಲ. ಗುಪ್ತವಾಗಿ ರಕ್ತದೊತ್ತಡ (ಬಿಪಿ), ಸಕ್ಕರೆ ಕಾಯಿಲೆ ಅವಿತುಕೊಂಡಿರುತ್ತವೆ. ವೈದ್ಯರ ಬಳಿ ತಪಾಸಣೆ ಮಾಡಿದಾಗ ರೋಗಗಳು ಕಾಣಿಸುತ್ತವೆ ಎಂದರು.
ಆರೋಗ್ಯ ಚೆನ್ನಾಗಿದ್ದರೆ ನಮ್ಮ ಕಾರ್ಯಗಳು ಸರಿಯಾಗಿರುತ್ತವೆ. ಆದ್ದರಿಂದ ಆರೋಗ್ಯ ತಪಾಸಣೆಗಾಗಿ ಸಮಯ ನಿಗದಿಪಡಿಸಿ ಕಾರ್ಯ ಚಟುವಟಿಕೆ ಹಾಕಿಕೊಳ್ಳಬೇಕು. ಇಂತಹ ಉಚಿತ ಶಿಬಿರಗಳನ್ನು ಮೇಲಿಂದ ಮೇಲೆ ಆಯೋಜಿಸುವ ಮೂಲಕ ಹಿರಿಯರು ಮತ್ತು ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಶಿಬಿರವು ಮಾರ್ಚ್ 2 ರವರೆಗೆ ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 5.30ರವರೆಗೆ ನಡೆಯಲಿದೆ. ಉಚಿತ ಫೂಟ್ ಪಲ್ಸ್ ತೆರಪಿ ಅಂದರೆ ಪ್ರತಿದಿನ 30 ನಿಮಿಷದ ವೈದ್ಯಕೀಯವಾಗಿ ಪ್ರಮಾಣಿತವಾದ ಥೆರಪಿಯಿಂದ ಬಿಪಿ, ಶುಗರ್, ಥೈರಾಯ್ಡ, ಮಂಡಿ ನೋವು, ವೆರಿಕೋಸ್ ವೈನ್ಸ್, ನಿದ್ರಾಹೀನತೆ ಹೀಗೆ 120ಕ್ಕೂ ಹೆಚ್ಚು ಆರೋಗ್ಯದ ಸಮಸ್ಯೆಗೆ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಇದರ ಸದುಪಯೋಗವನ್ನು ನಗರದ ಎಲ್ಲ ಸಾರ್ವಜನಿಕರು ಪಡೆಯಬೇಕು ಎಂದು ಕೋರಿದರು.
ಕಂಪಾನಿಯೋ ಸಂಸ್ಥೆಯ ರಘುನಾಥ್, ಮುಖಂಡರಾದ ಸತ್ಯಾನಂದ ವಿಟ್ಟು, ಭಾಗ್ಯಶ್ರೀ, ಪರಮೇಶ್, ಲೋಹಿತ್ ಶರ್ಮ ಇತರರಿದ್ದರು.