ಹುನಗುಂದ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಅಪಾರ ನೀರು ಹರಿದುಬರುತ್ತಿದ್ದು, ತಾಲೂಕಿನ ನದಿ ಪಾತ್ರದಲ್ಲಿ ಪ್ರವಾಹಕ್ಕೊಳಪಡಲಿರುವ 36 ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಸಭಾಂಗಣದಲ್ಲಿ ಬುಧವಾರ ನಡೆದ ಪ್ರವಾಹ ಭೀತಿ ಹಿನ್ನೆಲೆ ಮುಂಜಾಗ್ರತೆ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನ ಕೂಡಲಸಂಗಮ, ಚವಡಕಮಲದಿನ್ನಿ, ಬಿಸಲದಿನ್ನಿ, ವಳಕಲದಿನ್ನಿ, ತುರಡಗಿ, ಕಟಗೂರ, ವರಗೋಡದಿನ್ನಿ, ಖಜಗಲ್, ಕೆಂಗಲ್‌ಕಡಪಟ್ಟಿ, ಗಂಜಿಹಾಳ, ನಂದನೂರ, ಹಿರೇಮಳಗಾವಿ, ಚಿಕ್ಕಮಳಗಾವಿ, ಚಿಕ್ಕಮಾಗಿ, ಪಾಪಥನಾಳ, ಖೈರವಾಡಗಿ, ಹೂವನೂರ, ಬೆಳಗಲ್, ಮೇದಿನಾಪುರ, ಬಿಸನಾಳಕೊಪ್ಪ, ಚಿತ್ತರಗಿ, ಗಂಗೂರ, ಧನ್ನೂರ, ಎಮ್ಮೆಟ್ಟಿ, ಅಡಿವಿಹಾಳ, ಇದ್ದಲಗಿ, ಕಮದತ್ತ, ಐಹೊಳೆ, ನಿಂಬಲಗುಂದಿ, ರಾಮಥಾಳ, ಮುಳ್ಳೂರ, ಸುರಳಿಕಲ್, ಹಿರೇಮಾಗಿ, ಬೇವಿನಾಳ ಹಾಗೂ ಕಮತಗಿ ಸೇರಿ ಮುಂತಾದ ಗ್ರಾಮಗಳಿಗೆ ಪ್ರವಾಹ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ತಾಲೂಕುಮಟ್ಟದ ಅಧಿಕಾರಿಗಳು ಆಯಾ ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಪ್ರವಾಹಕ್ಕೊಳಗಾಗುವ ಗ್ರಾಮಗಳ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಸಂತ್ರಸ್ತರಿಗೆ ಆಹಾರ ಮತ್ತು ವೈದ್ಯಕೀಯ ಸೇವೆ ಸೇರಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದರು.
ಮಳೆ, ಪ್ರವಾಹಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನಿತ್ಯ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು. ನೋಡಲ್ ಅಧಿಕಾರಿಗಳು ನಿಗದಿಪಡಿಸಿದ ಸ್ಥಳದಲ್ಲೇ ಕಾರ್ಯನಿರ್ವಹಿಸಬೇಕು. ಕಾಳಜಿ ಕೇಂದ್ರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.
ಸಿಪಿಐ ಸುನೀಲ ಸವದಿ, ಸಿಡಿಪಿಒ ವಿ.ಎ. ಗಿರಿತಿಮ್ಮಣ್ಣವರ, ಟಿಎಚ್‌ಒ ಸಂಗಮೇಶ ಅಂಗಡಿ, ಸಮಾಜ ಕಲ್ಯಾಣ ಅಧಿಕಾರಿ ಎಂ.ಎಚ್. ಕಟ್ಟಿಮನಿ, ಪಿಡಬ್ಲೂಡಿ ಎಇಇ ವೆಂಕಟೇಶ ಹೂಲಗೇರಿ, ಸಂಗಮೇಶ ಗಡೇದ, ಪಂಚಾಕ್ಷರಯ್ಯ ಪುರಾಣಿಕಮಠ, ಎಸ್.ಡಿ. ಬಬಲಾದಿ, ಎಸ್.ಬಿ. ಗೋನಾಳ ಹಾಜರಿದ್ದರು.