ಹುನಗುಂದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು. ತಹಸೀಲ್ದಾರ್ ಬಸವಲಿಂಗಪ್ಪ ನೈಕೋಡಿ, ಇಳಕಲ್ಲ ತಹಸೀಲ್ದಾರ್ ಬಸವರಾಜ ಬೆಳವಂಕಿ ಇತರರಿದ್ದರು. 
ಜಿಲ್ಲೆ

ಕುಡಿವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ

ಗಿರೀಶ ಸಗರ

ಹುನಗುಂದ : ಮುಂಗಾರು ಮಳೆ ಸರಿಯಾಗಿ ಆಗದಿರುವುದರಿಂದ ತಾಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ವಿಜಯಾಂದ ಕಾಶಪ್ಪನವರ ಸೂಚಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಶನಿವಾರ ಕುಡಿಯುವ ನೀರಿನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಂಬಂಧಿತ ಅಧಿಕಾರಿಗಳು ಹಾಗೂ ಪಿಡಿಒ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು.

ತಾಲೂಕಿನಲ್ಲಿ ಸ್ಥಗಿತಗೊಂಡ ಶುದ್ಧ ನೀರಿನ ಘಟಕಗಳನ್ನು ಕೂಡಲೇ ದುರಸ್ತಿಗೊಳಿಸಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಜಲ ಮೂಲಗಳ ಲಭ್ಯತೆ ಇಲ್ಲದಿದ್ದಾಗ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕು ಎಂದರು.

ತಾಲೂಕಿನಲ್ಲಿ ಹೊಸದಾಗಿ ಮಂಜೂರಾದ 110 ಮತ್ತು 220 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಿಗೆ ಜಮೀನುಗಳನ್ನು ಗುರುತಿಸುವಂತೆ ಕಂದಾಯ ಇಲಾಖೆ ಮತ್ತು ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮುಳುಗಡೆ ಪ್ರದೇಶದಲ್ಲಿ ಮನೆಗಳನ್ನು ಕಳೆದುಕೊಂಡ ಲಾನುಭವಿಗಳಿಗೆ ಪುನರ್ವಸತಿಯ 210 ಹಕ್ಕು ಪತ್ರಗಳನ್ನು ನೀಡಲು ಕೂಡಲೇ ದಿನಾಂಕ ನಿಗದಿ ಪಡಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ತಹಸೀಲ್ದಾರ್ ಬಸವಲಿಂಗಪ್ಪ ನೈಕೋಡಿ, ಇಳಕಲ್ಲ ತಹಸೀಲ್ದಾರ್ ಬಸವರಾಜ ಬೆಳವಂಕಿ, ಹುನಗುಂದ-ಇಳಕಲ್ಲ ತಾಪಂ ಇಒ ಸಂಜೀವ ಜಿನ್ನೂರ, ಇಳಕಲ್ಲ ನಗರಸಭೆ ಪೌರಾಯುಕ್ತ ರಾಜು ಬಣಗಾರ, ಹುನಗುಂದ ಪುರಸಭೆ ಮುಖ್ಯಾಧಿಕಾರಿ ಸತೀಶಕುಮಾರ ಚವಡಿ, ಶಿರಸ್ತೆದಾರ್ ಈಶ್ವರ ಗಡ್ಡಿ ಇತರರಿದ್ದರು.