ಬೇಲೂರು: ಹಳೇ ಕಟ್ಟಡದ ಸಜ್ಜಾ ಬಿದ್ದು ಎರಡು ಜೀವಗಳನ್ನು ಬಲಿಯಾದ ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ ಎಂದು ಶಾಸಕ ಎಚ್.ಕೆ.ಸುರೇಶ್, ಸದನದಲ್ಲಿ ಸಭಾಧ್ಯಕ್ಷರಲ್ಲಿ ಸೋಮವಾರ ಮನವಿ ಮಾಡಿದರು.
ಸೋಮವಾರ ಬೆಳಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಸದನದ ಶೂನ್ಯ ವೇಳೆಯಲ್ಲಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಭಾನುವಾರ ಬೇಲೂರಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಹಳೇ ಕಟ್ಟಡದ ಸಜ್ಜಾ ಕುಸಿದು ಸ್ಥಳದಲ್ಲಿಯೇ ಇಬ್ಬರು ಬೀದಿಬದಿ ವ್ಯಾಪಾರಿಗಳು ಮೃತ ಪಟ್ಡಿದ್ದು, ಕೂಲಿ ನಾಲಿ ಮಾಡಿ ಜೀವನವನ್ನು ನಿರ್ವಹಣೆ ಮಾಡುತ್ತಿದ್ದ ಇವರ ಸಾವಿನಿಂದ ಇಡೀ ಕುಟುಂಬ ಬೀದಿಗೆ ಬರುವಂತಾಗಿದೆ. ಮದುವೆಯಾಗದಿರುವ ಮಕ್ಕಳಿದ್ದು, ಅವರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ ಎಂಬುದು ಪ್ರಶ್ನೆಯಾಗಿದೆ. ವಾಣಿಜ್ಯ ಮಳಿಗೆಯ ಸಜ್ಜಾ ಕುಸಿತದಿಂದ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದು ವೈದ್ಯಕೀಯ ಚಿಕಿತ್ಸೆಯನ್ನು ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ. ಇವರು ಬದುಕು ನಡೆಸುವುದು ಕಷ್ಟವಾಗಿದ್ದು, ಇವರನ್ನೇ ನಂಬಿರುವ ಮಕ್ಕಳನ್ನು ನೋಡಿಕೊಳ್ಳುವವರಾರು? ಇಂತಹ ದುರಂತ ಘಟನೆಗಳು ನಡೆದರೂ ಸ್ಥಳಕ್ಕೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಬಾರದೆ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಲು ಕಾರಣವಾಗಿದೆ ಎಂದರು.
ಇಲ್ಲಿ ಸಾವಿಗೀಡಾದವರ ಸಾವಿಗೆ ಬೆಲೆಯೇ ಇಲ್ಲವೇ? ಬಡವರ ಸಾವು ಎಂದರೆ ಇಷ್ಟೊಂದು ನಿರ್ಲಕ್ಷ್ಯವೇ ಎಂದು ಸಾರ್ವಜನಿಕರು ಆಕ್ರೋಶದ ಮಾತುಗಳನ್ನಾಡುತ್ತಿದ್ದಾರೆ. ಜನರಿಗೆ ಉತ್ತರ ಕೊಡಲು ನನಗೆ ಕಷ್ಟವಾಗಿದೆ. ಮತ್ತೆ ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ನಮ್ಮ ಕ್ಷೇತ್ರದಲ್ಲಿ ನಡೆಯದಂತೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಇಂತಹ ಘಟನೆಗಳಿಂದ ಅದೆಷ್ಟೋ ಜೀವನಗಳು ಬೀದಿ ಪಾಲಾಗಿರುತ್ತವೆ. ಈ ಘಟನೆಯಿಂದಲಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಬೇಲೂರು ಪಟ್ಟಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ಅನೇಕ ಕಟ್ಟಡಗಳಿದ್ದು, ಅವುಗಳನ್ನು ಕೂಡಲೇ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸದರಿ ಘಟನೆಯಿಂದ ಮೃತರಾದ ಅಮರ್‌ನಾಥ್, ನಜೀರ್ ಅವರ ಕುಟುಂಬಕ್ಕೆ 50 ಲಕ್ಷ ರೂ. ಹಾಗೂ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಲೀಲಮ್ಮ ಮತ್ತು ಜ್ಯೋತಿ ಅವರಿಗೆ 25 ಲಕ್ಷ ರೂ. ಪರಿಹಾರವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತಿಗೆ ಧ್ವನಿಗೂಡಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬೇಲೂರಿನಂತ ಪಟ್ಟಣದಲ್ಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ದುರದೃಷ್ಟಕರ. ಇಂತಹ ಘಟನೆ ನಡೆದ ತಕ್ಷಣ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರಬೇಕಿತ್ತು. ಬಾರದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತದೆ. ಇಂತಹ ಘಟನೆಗಳು ಆಗದಂತೆ ಕ್ರಮ ವಹಿಸಬೇಕು. ರಾಜ್ಯದಲ್ಲೆಡೆ ಇರುವ ಇಂತಹ ಶಿಥಿಲಾವಸ್ಥೆಯ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕರ ಪ್ರಾಣ ಉಳಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.