ಹನೂರು: ಪರಿಣಾಮಕಾರಿಯಾಗಿ ಬೋಧನೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸದಿದ್ದಲ್ಲಿ ವರ್ಗಾವಣೆ ಬಯಸಿ ಕ್ಷೇತ್ರದಿಂದ ಹೊರಡಿ ಎಂದು ಶಾಸಕ ಎಂ.ಆರ್. ಮಂಜುನಾಥ್ ಅವರು ಕಡಿಮೆ ಫಲಿತಾಂಶ ಪಡೆದ ಶಾಲಾ ಮುಖ್ಯಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣದ ಬಿಆರ್‌ಸಿ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸುವ ಸಂಬಂಧ ಆಯೋಜಿಸಿದ್ದ ಪ್ರೌಢಶಾಲಾ ಮುಖ್ಯಶಿಕ್ಷಕರ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.
ಹನೂರು ಭಾಗವು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಇಲ್ಲಿನ ಮಕ್ಕಳಲ್ಲಿ ಬೌದ್ಧಿಕ ಶಕ್ತಿ ಉತ್ತಮವಾಗಿದೆ. ಈಗಿರುವಾಗ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಗಣನೀಯವಾಗಿ ಕುಸಿದಿರುವುದು ಎಷ್ಟರ ಮಟ್ಟಿಗೆ ಸರಿ? ಇದರಲ್ಲಿ ಶಿಕ್ಷಕರ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದ್ದು, ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ಆದ್ದರಿಂದ ಈ ಬಾರಿ ಫಲಿತಾಂಶವನ್ನು ಉತ್ತಮ ಪಡಿಸಲು ಪ್ರತಿಯೊಬ್ಬರೂ ಅಗತ್ಯ ಕ್ರಮವಹಿಸಬೇಕು. ಪರಿಣಾಮಕಾರಿಯಾಗಿ ಬೋಧನೆ ಕೈಗೊಳ್ಳಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅಗತ್ಯ ಶಿಕ್ಷಣ ನೀಡಬೇಕು. ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಎಂಬ ಭಾವನೆ ಹೊಂದುವುದರ ಮೂಲಕ ಶೈಕ್ಷಣಿಕ ಪ್ರಗತಿಗೆ ಕಾಳಜಿ ವಹಿಸಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು. ಇನ್ನು ಕಡಿಮೆ ಫಲಿತಾಂಶ ಪಡೆದ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಉತ್ತಮ ಫಲಿತಾಂಶವನ್ನು ಪಡೆಯುವುದರತ್ತ ಹೆಚ್ಚು ಗಮನಹರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇನ್ನು ಸಭೆಯಲ್ಲಿ ಶೈಕ್ಷಣಿಕ ವಲಯದ ಪ್ರೌಢಶಾಲೆಗಳಲ್ಲಿ ವಿಜ್ಞಾನ, ಹಿಂದಿ ಹಾಗೂ ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ ಎಂಬುದು ಕೇಳಿ ಬಂತು. ಜತೆಗೆ ಸಮರ್ಪಕ ಬಸ್ ಸೌಕರ್ಯ ಇಲ್ಲದ ಪರಿಣಾಮ ಶಿಕ್ಷಕರು ನಿಗದಿತ ವೇಳೆಗೆ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಶಿಕ್ಷಕರು ಸಮಸ್ಯೆ ಹೇಳಿಕೊಂಡರು. ಈ ಬಗ್ಗೆ ಅಗತ್ಯ ಕ್ರಮವಹಿಸಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು. ಒಟ್ಟಿನಲ್ಲಿ ಶೈಕ್ಷಣಿಕ ವಲಯವು ಈ ಬಾರಿ ಉತ್ತಮ ಫಲಿತಾಂಶ ಪಡೆಯಬೇಕು ಎಂದರು. ಇದೇ ವೇಳೆ ಕೊರತೆ ಇರುವ ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ತಾಲೂಕು ಪಂಚಾಯಿತಿ ಇಒ ಉಮೇಶ್ ಅವರಿಗೆ ಸೂಚಿಸಲಾಯಿತು.
ಸಭೆಯಲ್ಲಿ ಬಿಇಒ ಗುರುಲಿಂಗಯ್ಯ, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರ ಅಶೋಕ್, ಚಿನ್ನಪ್ಪಯ್ಯ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.