ಜಿಲ್ಲೆ

ಔಷಧೋಪಚಾರದ ಕೊರತೆ ಆಗದಂತೆ ಎಚ್ಚರ ವಹಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ, ಉಚಿತ ಔಷಧೋಪಚಾರ ನೀಡಬೇಕು. ಗರ್ಭಿಣಿ, ಬಾಣಂತಿಯರಿಗೆ ಮತ್ತು ನವಜಾತ ಶಿಶುಗಳಿಗೆ ಸಕಾಲಕ್ಕೆ ಅಗತ್ಯ ಚಿಕಿತ್ಸೆ, ಔಷಧಿ ನೀಡಬೇಕು. ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ, ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿ, ರೋಗಿಗಳು, ಪಾಲಕರೊಂದಿಗೆ ಸಮಾಲೋಚನೆ ನಡೆಸಿದರು. ವೈದ್ಯರ ಸ್ಪಂದನೆ, ಚಿಕಿತ್ಸೆಗಳ ಮಾಹಿತಿ, ಆಸ್ಪತ್ರೆ ಕಾರ್ಯನಿರ್ವಹಣೆ ಬಗ್ಗೆ ಜನರಿಂದ ಅಭಿಪ್ರಾಯ ಪಡೆದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ 250 ಹಾಸಿಗೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆಯ 100 ಹಾಸಿಗೆ ಸೇರಿ 350 ಬೆಡ್​ ವ್ಯವಸ್ಥೆ ಇದೆ. ನಿತ್ಯ 1,700ರಷ್ಟು ಹೊರರೋಗಿಗಳು ನೋಂದಣಿ ಮಾಡಿಕೊಳ್ಳುತ್ತಾರೆ. ತಿಂಗಳಿಗೆ ಸರಾಸರಿ 450 ಹೆರಿಗೆ ಆಗುತ್ತವೆ. 400ಕ್ಕೂ ಹೆಚ್ಚು ಜನರು ಶಸ್ತ್ರ ಚಿಕಿತ್ಸೆಗೆ ಒಳಪಡುತ್ತಾರೆ. ಆಯುಷ್ಮಾನ ಭಾರತ, ಪ್ರಧಾನಮಂತ್ರಿ ಜನಾರೋಗ್ಯ, ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಶೇ. 89ರಷ್ಟು ಚಿಕಿತ್ಸಾ ಪೂರ್ವ ದೃಢೀಕರಣದಿಂದ ಆರ್ಥಿಕ ಸೌಲಭ್ಯ ಪಡೆಯಲಾಗುತ್ತಿದೆ ಎಂದರು.

2024ರ ಏಪ್ರಿಲ್​ನಿಂದ ಡಿಸೆಂಬರ್​ವರೆಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಧಾರವಾಡ ಜಿಲ್ಲೆಯ 11 ಹಾಗೂ ಹೊರ ಜಿಲ್ಲೆಯ 24 ಗರ್ಭಿಣಿಯರು ಸೇರಿ 35 ಗರ್ಭಿಣಿಯರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಗರ್ಭಿಣಿಯರ ಸಾವಿನ ಪ್ರಮಾಣ ಕಡಿಮೆ ಇದೆ. ಧಾರವಾಡ ಜಿಲ್ಲೆಗೆ ನೆರೆಯ ಉತ್ತರಕನ್ನಡ, ಬೆಳಗಾವಿ, ಬಾಗಲಕೋಟ, ಗದಗ ಮತ್ತು ಹಾವೇರಿ ಜಿಲ್ಲೆ ರೋಗಿಗಳು, ಗರ್ಭಿಣಿಯರು ಆಗಮಿಸಿ ಚಿಕಿತ್ಸೆ ಪಡೆಯುತ್ತಾರೆ ಎಂದರು.

ಎಚ್​ಎಂಪಿವಿ ಪ್ರಕರಣಗಳ ನಿರ್ವಹಣೆಗೆ, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಅಗತ್ಯ ಬಿದ್ದರೆ ಚಿಕಿತ್ಸೆಗಾಗಿ 10 ಬೆಡ್​ ಮೀಸಲಿಡಲಾಗಿದೆ ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಆರ್​ಸಿಎಚ್​ ಅಧಿಕಾರಿ ಡಾ. ಸುಜಾತಾ ಹಸವೀಮಠ, ಇತರರು ಇದ್ದರು.