RemasterDirector_1a5c03258 
ಜಿಲ್ಲೆ

ಹಿರಿಯ ನಾಗರಿಕರ ಆರೋಗ್ಯ ಕಾಳಜಿ ವಹಿಸಿ


ಪಿರಿಯಾಪಟ್ಟಣ : ಇತ್ತೀಚೆಗೆ ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಪಿರಿಯಾಪಟ್ಟಣ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಪಿ.ಕೆ.ಕುಮಾರ್ ಬೇಸರ ವ್ಯಕ್ತಪಡಿಸಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಪಿರಿಯಾಪಟ್ಟಣ ಲಯನ್ಸ್ ಕ್ಲಬ್‌ನಿಂದ ಇತ್ತೀಚಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಮಾತನಾಡಿದರು.

ಹಿರಿಯ ನಾಗರಿಕರನ್ನು ನಾವು ಗೌರವದಿಂದ ಕಾಣುವ ಜತೆಗೆ ಅವರ ಆರೋಗ್ಯದ ಕಾಳಜಿ ವಹಿಸುವ ಅಗತ್ಯವಿದೆ. ಹಿರಿಯ ನಾಗರಿಕರು ವಯೋಸಹಜ ಕಾಯಿಲೆಗಳ ಜತೆಗೆ ಮಾನಸಿಕ ಹೊಯ್ದಟದಿಂದ ಕುಟುಂಬದವರೊಂದಿಗೆ ಕಠಿಣವಾಗಿ ವರ್ತಿಸತೊಡಗಿದರೆ ಇದನ್ನೇ ನೆಪವಾಗಿಸಿಕೊಂಡು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಣ್ಣಯ್ಯ ಶೆಟ್ಟಿ, ಹಿರಿಯ ನಾಗರಿಕರನ್ನು ಅನಾಥರಂತೆ ಕಾಣುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಶಾಲಾ, ಕಾಲೇಜುಗಳಲ್ಲಿ ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿಯನ್ನು ಹೇಳಿಕೊಡುವ ಅಗತ್ಯವಿದೆ. ಸರ್ಕಾರಗಳು ಸಹ ಹಿರಿಯ ನಾಗರಿಕರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುವತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯದರ್ಶಿ ಜೆ.ಗಿರೀಶ್, ಖಜಾಂಚಿ ಲವಕುಮಾರ್, ವಲಯಾಧ್ಯಕ್ಷ ಕೆ.ಎ.ಮಹದೇವಪ್ಪ, ಸದಸ್ಯರಾದ ಮಂಜುನಾಥ್ ಸಿಂಗ್, ವಿಜಯಕುಮಾರ್, ವಿನೋದ್ ಕುಮಾರ್ ಹಾಗೂ ಪುರಸಭಾ ಸದಸ್ಯ ಪಿ.ಸಿ.ಕೃಷ್ಣ, ಸನ್ಮಾನಿತರಾದ ಅಣ್ಣಯ್ಯ ಶೆಟ್ಟಿ, ಮುರಳಿ, ಕುಮಾರಸ್ವಾಮಿ, ರಾಜಶೇಖರ್, ಶ್ರೀನಿವಾಸಯ್ಯ ಹಾಜರಿದ್ದರು.