ಬಳ್ಳಾರಿ: ಪೌರಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಸೂಚಿಸಿದರು.
ಇದನ್ನೂ ಓದಿ:ಕನ್ನಡ ಜಾಗೃತಿ ಸಮಿತಿ ಸದಸ್ಯರ ಸಭೆ
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಏಜೆನ್ಸಿಗಳು ಪೌರಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ಸಮರ್ಪಕವಾಗಿ ನೀಡಬೇಕು. ಆರೋಗ್ಯ ಸಮಸ್ಯೆಗಳು ಉಂಟಾಗದಂತೆ ನಿಗಾ ವಹಿಸಬೇಕು ಎಂದರು.
ಪೌರಕಾರ್ಮಿಕರ ಆರೋಗ್ಯದ ಕಾಳಜಿ ವಹಿಸುವುದು ಎಲ್ಲರ ಜವಾಬ್ದಾರಿ. ಪಿಎಫ್, ಇಎಸ್‌ಐ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳ ಸೌಲಭ್ಯಗಳ ಕುರಿತು ಅರಿವು ಕಾರ್ಯಾಗಾರ ಆಯೋಜಿಸಬೇಕು ಎಂದು ಸೂಚಿಸಿದರು.
ಸಫಾಯಿ ಕರ್ಮಚಾರಿ ಆಯೋಗದ ಸಂಶೋಧನಾಧಿಕಾರಿ ಮಹಾದೇವಸ್ವಾಮಿ ಮಾತನಾಡಿ, ನೇರಪಾವತಿ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೂ ಗೃಹಭಾಗ್ಯ ಸೌಲಭ್ಯ ನೀಡಬೇಕು. ಮ್ಯಾನುಯೆಲ್ ಸ್ಕಾೃವೆಂಜರ್ ಬಗ್ಗೆ ಮಾಹಿತಿ ಸಂಗ್ರಹಿಸಲು ಮೊಬೈಲ್ ಆ್ಯಪ್ ಸಿದ್ಧಪಡಿಸಿದ್ದು, ನಿಖರ ಮಾಹಿತಿ ನೀಡಬೇಕು. ಕೆಕೆಆರ್‌ಟಿಸಿ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಪೌರಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸದಿದ್ದರೆ ಅಂಥ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಜಿಲ್ಲಾ ಶಸ್ತಚಿಕಿತ್ಸಕರಿಗೆ ತಾಕೀತು ಮಾಡಿದರು.
ನ.7ರಂದು ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನದ ನಿಮಿತ್ತ ಎಸ್ಸೆಸ್ಸೆಲ್ಸಿ, ಪಿಯುಸಿ, ಉನ್ನತ ಶಿಕ್ಷಣ ಪಡೆದ ಪೌರಕಾರ್ಮಿಕರ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಬೇಕು. ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರ ಸಭೆ ಕರೆದು ಸಮಸ್ಯೆಗಳನ್ನು ಕೇಳಬೇಕು ಎಂದು ಚಂದ್ರಕಲಾ ಸೂಚಿಸಿದರು.