ರಾಯಚೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಸಿದಂತೆ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಅವೈಜ್ಞಾನಿಕ ನಿಯಮಗಳನ್ನು ಹಿಂಪಡೆಯಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ಗೆ ಶನಿವಾರ ಮನವಿ ಸಲ್ಲಿಸಿ, ಇಲಾಖೆ 10 ತಿಂಗಳಿಗೆ ಅತಿಥಿ ಉಪನ್ಯಾಶಕರನ್ನು ನೇಮಕ ಮಾಡಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡಿದೆ. ಆದರೆ ಕಾರ್ಯಭಾರ ಇಲ್ಲ ಎಂದು ಕರ್ತವ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ದೂರಿದರು.
ಇದರಿಂದಾಗಿ ಒಂದೆರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಬೀದಿಪಾಲಾಗುವಂತಾಗಿದೆ. ಇತ್ತೀಚೆಗೆ ಸಿಂಧನೂರಿನಲ್ಲಿ ಅತಿಥಿ ಉಪನ್ಯಾಸಕ ಶಿವಪುತ್ರಪ್ಪ ವೇತನ ಇಲ್ಲದೆ ಕುಟುಂಬ ನಿರ್ವಹಣೆ ಸಂಕಷ್ಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅತಿಥಿ ಉಪನ್ಯಾಸಕರು ಪರೀಕ್ಷಾ ಹಾಗೂ ವೌಲ್ಯಮಾಪನ ಕಾರ್ಯಕ್ಕೆ ಹಾಜರಾಗಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ. ಆದರೆ ಕಾಲೇಜುಗಳಲ್ಲಿನ ಪ್ರಾಚಾರ್ಯರು ಅತಿಥಿ ಉಪನ್ಯಾಸಕರನ್ನು ಜೀತದಾಳುಗಳಂತೆ ಮನಸ್ಸಿಗೆ ಬಂದಂತೆ ಕೆಲಸ ಹೇಳಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ.
ಕೂಡಲೇ ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು. ಬಾಕಿಯಿರುವ ಎರಡು ತಿಂಗಳ ವೇತನ ಬಿಡುಗಡೆ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ಶಿವಪುತ್ರಪ್ಪ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಹಾಗೂ ಉದ್ಯೋಗ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಗೌರವಾಧ್ಯಕ್ಷ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ, ಜಿಲ್ಲಾಧ್ಯಕ್ಷ ಡಾ.ಶ್ರೀನಿವಾಸ ಹೊಸಪೇಟೆ, ಪದಾಕರಿಗಳಾದ ಡಾ.ಹನುಮಂತ ಕುರ್ಡಿ, ಈರಣ್ಣ ಗಟ್ಟು ಬಿಚ್ಚಾಲಿ ಇದ್ದರು.