ಜಿಲ್ಲೆ

ಕಾಂಗ್ರೆಸ್‌ನ ಸುತ್ತೋಲೆ ಹಿಂದಕ್ಕೆ ಪಡೆಯಿರಿ: ಕಂಠಿ ಕಾರ್ಯಪ್ಪ

ಮಡಿಕೇರಿ: ರಾಜ್ಯ ಸರ್ಕಾರ ಅರಣ್ಯ ಮತ್ತು ಕಂದಾಯ ಇಲಾಖೆಯ ಮೂಲಕ ಹೊರಡಿಸಿರುವ ಕೊಡಗಿನ ಜನರು ಹಾಗೂ ಬೆಳೆಗಾರರಿಗೆ ಮಾರಕವಾಗಬಲ್ಲ ಸುತ್ತೋಲೆಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಒತ್ತಾಯಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸುತ್ತೋಲೆಗಳ ಮೂಲಕ ಕೊಡಗಿನ ಜನರಿಗೆ ಕಿರುಕುಳ ನೀಡುತ್ತಿದೆ. ರೈತರು ಕಳೆದ ೩೦-೪೦ ವರ್ಷಗಳಿಂದ ಕೃಷಿ ಮಾಡಿ ಬದುಕು ಸಾಗಿಸುತ್ತಿರುವ ಸಿ ಮತ್ತು ಡಿ ಭೂಮಿಯನ್ನು ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದ್ದು, ಈಗಾಗಲೇ ಕಂದಾಯ ಇಲಾಖೆಯಿಂದ ಸರ್ವೆ ಕಾರ್ಯ ಆರಂಭಗೊಂಡಿದೆ. ಸಿ ಮತ್ತು ಡಿ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಕೊಡಗಿನ ರೈತರು ಕಂದಾಯ ಪಾವತಿಸುತ್ತಿರುವುದಲ್ಲದೆ ಹಕ್ಕುಪತ್ರವನ್ನು ಕೂಡ ಹೊಂದಿದ್ದಾರೆ. ಆದರೆ ಇದೀಗ ರಾಜ್ಯ ಸರ್ಕಾರದ ದಿಢೀರ್ ನಿರ್ಧಾರದಿಂದ ಕೃಷಿಕರು ಭೂಮಿ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ಕೊಡಗಿನ ಜನರಿಗೆ ಮಾರಕವಾಗಬಲ್ಲ ಸುತ್ತೋಲೆಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾದ ಶಾಸಕರುಗಳು ಜನರ ನೆರವಿಗೆ ಬಾರದೆ ಮೂಡ ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿಗಳ ರಕ್ಷಣೆಗೆ ನಿಂತಿದ್ದಾರೆ. ಸರ್ಕಾರಕ್ಕೆ ಜಿಲ್ಲೆಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಸುತ್ತೋಲೆಗಳನ್ನು ತಡೆಹಿಡಿಯುವ ಪ್ರಯತ್ನ ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವ ಶಾಸಕರುಗಳ ಧೋರಣೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಸರ್ಕಾರ ಸುತ್ತೋಲೆಗಳನ್ನು ವಾಪಾಸ್ಸು ಪಡೆದು ಕೊಡಗಿನ ಜನರು ನಿರಾತಂಕವಾಗಿ ಜೀವನ ನಡೆಸಲು ಅವಕಾಶ ಕಲ್ಪಿಸದಿದ್ದಲ್ಲಿ ಬಿಜೆಪಿ ವತಿಯಿಂದ ಜಿಲ್ಲಾವ್ಯಾಪಿ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.