ಬೆಟ್ಟದಪುರ: ಮೈಸೂರು ಜಿಲ್ಲಾ ಒಕ್ಕೂಟದಿಂದ ಉತ್ಪಾದಕರಿಗೆ ಹಾಗೂ ಹಸುಗಳಿಗೆ ನೀಡಲಾಗುತ್ತಿರುವ ವಿಮೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ಆಯೋಜಿಸಿದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕೂಟದಿಂದ ಉತ್ಪಾದಕರಿಗೆ ಅನುಕೂಲಕರವಾಗುವಂತಹ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇವುಗಳ ಬಗ್ಗೆ ಸೂಕ್ತ ಮಾಹಿತಿ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು. ಹಸುಗಳ ಆರೋಗ್ಯ ಹಾಗೂ ಗುಣಮಟ್ಟದ ಹಾಲು ಸರಬರಾಜು ಮಾಡಲು ನಂದಿನಿ ಪಶು ಆಹಾರ ಮತ್ತು ಖನಿಜ ಮಿಶ್ರಣ ಬಳಸಿ. ಈ ಸಂಘವು 2024-25ನೇ ಸಾಲಿನಲ್ಲಿ ರೂ.5,60,000 ನಿವ್ವಳ ಲಾಭ ಗಳಿಸಿದ್ದು, ಸಂಘದ ಅಭಿವೃದ್ಧಿಗೆ ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಬಹುಮಾನ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಸಂಘದ ಆಡಳಿತಾಧಿಕಾರಿ ಅವಿನಾಶ್, ಗ್ರಾಮದ ಮುಖಂಡರಾದ ಸಿ.ಎನ್ ಬಸವರಾಜು, ಈ.ರಾಜು, ಮುತ್ತುರಾಜೇಗೌಡ, ನಾಗರಾಜೇಗೌಡ, ಸಿ.ಆರ್.ಅಂಜನೀಗೌಡ, ನಂಜುಂಡೇಗೌಡ, ಗೌರಿಶಂಕರ್, ಸುರೇಶ ಕುಮಾರ್, ಶಿವಣ್ಣ, ಪುಟ್ಟಭೋವಿ ಅಪ್ಪಣ್ಣ, ಸಂಘದ ಸಿಇಒ ನಂದೀಶ್, ಸಿಬ್ಬಂದಿ ಶಿವುಕುಮಾರ್, ಗೋವಿಂದೆಗೌಡ, ಕಿರಣ್ ಸೇರಿದಂತೆ ಮುಖಂಡರು, ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.