ಮಲೆಮಹದೇಶ್ವರ ಬೆಟ್ಟದಲ್ಲಿ ಸ್ವಾಮಿತ್ವ ಯೋಜನೆ ಅನುಷ್ಟಾನ ಸಂಬಂಧ ಆಯೋಜಿಸಿದ್ದ ಸಭೆಯನ್ನು ಎಂ.ಆರ್ ಮಂಜುನಾಥ್ ಉದ್ಘಾಟಿಸಿದರು. ಅರ್ಚನಾ, ಎ.ಈ. ರಘು, ಕೆ.ಎನ್ ಚೈತ್ರಾ, ಚೇತನ್ ಇತರರು ಇದ್ದರು. 
ಜಿಲ್ಲೆ

‘ಸ್ವಾಮಿತ್ವ’ ಯೋಜನೆ ಪ್ರಯೋಜನ ಪಡೆಯಿರಿ

ಶಿವಶಂಕರ್ ಎಂ. ಹೆಬ್ಬಳ್ಳ

ಹನೂರು : ಇ-ಸ್ವತ್ತು ಸಮಸ್ಯೆಯಿಂದ ಮುಕ್ತಿ ಹೊಂದಲು ಹಾಗೂ ನಿಖರ ದಾಖಲೆಯನ್ನು ಪಡೆಯುವ ಸಲುವಾಗಿ ವಸತಿ ಪ್ರದೇಶಗಳನ್ನು ಡ್ರೋನ್ ಮೂಲಕ ಸರ್ವೇ ನಡೆಸಲು ಜಾರಿಗೊಳಿಸಿರುವ ಸ್ವಾಮಿತ್ವ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ವಾಣಿಜ್ಯ ಸಂಕೀರ್ಣದ ಸಭಾಂಗಣದಲ್ಲಿ ಸೋಮವಾರ ಸ್ವಾಮಿತ್ವ ಯೋಜನೆಯ ಅನುಷ್ಠಾನ ಸಂಬಂಧ ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಕಂದಾಯ ಇಲಾಖೆ ತೆರಿಗೆಯನ್ನು ವಸೂಲು ಮಾಡುವ ಸಲುವಾಗಿ ವಸತಿ ಪ್ರದೇಶಗಳನ್ನು ಗುರ್ತಿಸಿ ದಾಖಲಿಸಿತ್ತು. ಆದರೆ ಆಯಾ ಗ್ರಾಮ ಠಾಣಾ ವ್ಯಾಪ್ತಿಯ ವಸತಿ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಿ ಸರ್ವೇ ಕಾರ್ಯ ನಡೆಸಿ ನಿಖರವಾದ ದಾಖಲೆಗಳನ್ನು ಸಂಗ್ರಹಿಸಿರಲಿಲ್ಲ. ಬಳಿಕ ಇ ಸ್ವತ್ತು ಮೂಲಕ ನಿಖರ ಆಸ್ತಿ ವಿವರವನ್ನು ಹೊಂದುವಂತಾಗಿತ್ತು. ಆದರೂ ಇದರಿಂದ ಜನರು ಸಮಸ್ಯೆಯನ್ನು ಎದುರಿಸುತ್ತಿದ್ದರು. ಆಸ್ತಿ ಬದಲಾವಣೆ ಹಾಗೂ ಸರ್ಕಾರದಿಂದ ಸಿಗುವ ಸಲವತ್ತುಗಳನ್ನು ಪಡೆದುಕೊಳ್ಳಲು ತುಂಬ ಸಮಸ್ಯೆಯಾಗಿತ್ತು. ಹಾಗಾಗಿ ಇ ಸ್ವತ್ತಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ವಿನೂತನ ಸ್ವಾಮಿತ್ವ ಯೋಜನೆಯನ್ನು ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳಿಗೂ ವಿಸ್ತರಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಯೋಜನೆಯಡಿ ವಸತಿ ಪ್ರದೇಶಗಳನ್ನು ಡ್ರೋನ್ ಮೂಲಕ ಕಂದಾಯ ಹಾಗೂ ಗ್ರಾಪಂ ಸಿಬ್ಬಂದಿ ತಂಡದಿಂದ ಸರ್ವೇ ನಡೆಸಲಾಗುತ್ತದೆ. ಆದ್ದರಿಂದ ಈ ವೇಳೆ ಪ್ರತಿಯೊಬ್ಬರೂ ಸ್ಥಳದಲ್ಲಿದ್ದು ಅಗತ್ಯ ಮಾಹಿತಿಯನ್ನು ನೀಡುವುದರ ಮೂಲಕ ಸಹಕಾರ ನೀಡಬೇಕು. ಇದರಿಂದ ಸಂಪೂರ್ಣ ಆಸ್ತಿ ವಿವರವನ್ನು ಹೊಂದಿದ ನಿಖರ ದಾಖಲೆಯುಳ್ಳ ಪಿಆರ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇದು ಶಾಶ್ವತ ದಾಖಲೆಯಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಮುಖ್ಯ ದಾಖಲೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನ ಪಡೆದುಕೊಂಡು ನಿಖರವಾದ ದಾಖಲೆಯನ್ನು ಹೊಂದಬೇಕು ಎಂದು ತಿಳಿಸಿದರು.

ಮೂಲ ಸೌಕರ್ಯ ಒದಗಿಸಿ: ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಮ.ಬೆಟ್ಟದ ತಪ್ಪಲಿನ ಗ್ರಾಮಗಳಿಗೆ ಸಮರ್ಪಕ ರಸ್ತೆ, ವಿದ್ಯುತ್, ಚರಂಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯವಿಲ್ಲ. ಇದರಿಂದ ಕಷ್ಟದ ನಡುವೆ ಜೀವನ ನಡೆಸುತ್ತಿದ್ದೇವೆ. ಇನ್ನು ಕಾಡೋಲ ಹಾಗೂ ಶಾಂತಿ ನಗರದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ತುಂಬ ತೊಂದರೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಿ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಕಾಡಂಚಿನ ಗ್ರಾಮಗಳಿಗೆ ಸಮರ್ಪಕ ರಸ್ತೆ ಹಾಗೂ ವಿದ್ಯುತ್ ಸೌಕರ್ಯ ಕಾರ್ಯ ತಾಂತ್ರಿಕ ದೋಷಿದಿಂದ ಸ್ಥಗಿತಗೊಂಡಿದೆ. ಸರ್ವೇ ಕಾರ್ಯ ಬಳಿಕ ಈ ಬಗ್ಗೆ ಅಗತ್ಯ ಕ್ರಮವಹಿಸಿ ಗ್ರಾಮಗಳಿಗೆ ಮೂಲ ಸೌಕರ್ಯವನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಅರ್ಚನಾ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ತಹಸೀಲ್ದಾರ್ ಕೆ.ಎನ್. ಚೈತ್ರಾ, ಭೂ ಮಾಪನ ಇಲಾಖೆ ಅಧೀಕ್ಷಕ ಚೇತನ್, ಎಡಿಎಲ್‌ಆರ್ ನಟರಾಜು, ತಾಲೂಕು ಸರ್ವೇಯರ್ ಶ್ರೀನಿವಾಸ್, ಪಿಡಿಒ ಕಿರಣ್‌ಕುಮಾರ್ ಹಾಗೂ ಇನ್ನಿತರರು ಇದ್ದರು.