ಜಿಲ್ಲೆ

ಮಳಿಗೆಯ ಪ್ರಯೋಜನ ಪಡೆದುಕೊಳ್ಳಿರಿ

ಸಾಲಿಗ್ರಾಮ: ಭೇರ್ಯ ಸೇರಿದಂತೆ ಅಕ್ಕಪಕ್ಕದ ಗ್ರಾಮದವರು ಕೆಎಂಎಫ್ ಆರಂಭಿಸಿರುವ ಮಾರಾಟ ಮಳಿಗೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಭೇರ್ಯ ಗ್ರಾಮದಲ್ಲಿ ಮಂಗಳವಾರ ಮೈಮುಲ್ ವತಿಯಿಂದ ನಿರ್ಮಿಸಿರುವ ನಂದಿನಿ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಕೆಎಂಎಫ್ ಮಾರಾಟ ಮಳಿಗೆಗಳ ಮೂಲಕ ದಿನವಿಡೀ ಆರೋಗ್ಯಕರ ಹಾಲನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಗುಣಮಟ್ಟದ ಹಾಲು, ಮೊಸರು, ಲಸ್ಸಿ, ಮಜ್ಜಿಗೆಯ ಜತೆಗೆ ಇತರ ನಂದಿನಿ ಉತ್ಪನ್ನಗಳನ್ನು ಗ್ರಾಮೀಣ ಭಾಗದಲ್ಲಿ ಮಾರಾಟ ಮಾಡಲು ಮೈಮುಲ್ ಮಳಿಗೆ ಸ್ಥಾಪಿಸಿದೆ ಎಂದರು.

ಮೈಮುಲ್‌ನ ಉತ್ಪನ್ನಗಳ ಮಾರಾಟದ ಉಪ ವ್ಯವಸ್ಥಾಪಕ ರಾಜಶೇಖರ್ ಮಾತನಾಡಿ, ನಂದಿನಿ ಮಾರಾಟ ಮಳಿಗೆ ಈ ಭಾಗದ ಸಾರ್ವಜನಿಕರಿಗೆ, ವಿಶೇಷವಾಗಿ ಪ್ರಯಾಣಿಕರಿಗೆ ತಾಜಾ ಉತ್ಪನ್ನಗಳನ್ನು ನೀಡುತ್ತದೆ. ಗ್ರಾಹಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಮೈಮುಲ್ ಗ್ರಾಮಾಂತರ ಪ್ರದೇಶದಲ್ಲಿಯೂ ಹಾಲಿನ ಬೂತ್‌ಗಳನ್ನು ಪರಿಚಯಿಸುವುದರೊಂದಿಗೆ ಕ್ಷೀರ ಕ್ರಾಂತಿ ಮಾಡುತ್ತಿದೆ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಪಿ.ರಮೇಶ್, ಕಾಂಗ್ರೆಸ್ ಯುವ ಮುಖಂಡ ಬಿ.ಟಿ.ಮೋಹನ, ಗ್ರಾ.ಪಂ. ಸದಸ್ಯ ಬಿ.ಎಲ್.ರಾಜಶೇಖರ, ಹರ್ಷವರ್ಧಿನಿ, ಮಂಜಪ್ಪ, ಕೆ.ಆರ್.ನಗರ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದೆಗ್ಗನಹಳ್ಳಿ ಆನಂದ್, ಕಾವಲ್ ಹೊಸೂರು ಕಾಂತ, ಗಾರೆಕೃಷ್ಣ, ಬಾಚಹಳ್ಳಿ ಹರೀಶ್, ಖಾಲಿದ್ಧ್ ಪಾಷ ಇತರರು ಇದ್ದರು.