ಶಿರಹಟ್ಟಿ: ನರೇಗಾ ಯೋಜನೆಯಡಿ ಕಾಯಕ ಮಾಡುವ ಕೂಲಿಕಾರರಿಗೆ ಇದೇ ಏಪ್ರಿಲ್ 1ರಿಂದ ದಿನಗೂಲಿ ರೂ. 349ರಿಂದ 370 ಗಳಿಗೆ ಹೆಚ್ಚಳವಾಗಿದೆ ಎಂದು ತಾಪಂ ಇಒ ಆರ್.ವಿ. ದೊಡ್ಡಮನಿ ಹೇಳಿದರು.
ತಾಲೂಕಿನ ಕೋಗನೂರ ಗ್ರಾಪಂ ವ್ಯಾಪ್ತಿಯ ಗೋವನಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಅವರು ಭೇಟಿ ನೀಡಿ ಮಾತನಾಡಿದರು. ಜಾಬ್ ಕಾರ್ಡ್ ಇಲ್ಲದ ಕೂಲಿಕಾರರು ತಕ್ಷಣವೇ ತಮ್ಮ ದಾಖಲೆಗಳನ್ನು ನೀಡಿ ಹೊಸ ಜಾಬ್ ಕಾರ್ಡ್ ಪಡೆದು ಯೋಜನೆಯ ಲಾಭ ಪಡೆಯಬೇಕು. ಬೇಸಿಗೆಯಲ್ಲಿ ತೀವ್ರ ಬಿಸಿಲಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಮನಗಂಡು ಫಲಾನುಭವಿಗಳು ಹೆಚ್ಚು ನೀರು ಕುಡಿಯುವುದು, ನೀರನ್ನು ಕುದಿಸಿ ಕುಡಿಯುವುದು ಮುಂತಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾಜರಾತಿ ಪುಸ್ತಕದಲ್ಲಿ ಹೆಸರು ಇರುವ ಕೂಲಿಕಾರರು ಮಾತ್ರ ಕೆಲಸಕ್ಕೆ ಹಾಜರಾಗಬೇಕು. ಹೆಸರು ಇಲ್ಲದೆ ಬರುವ ಕೂಲಿಕಾರರಿಗೆ ಕೂಲಿ ಪಾವತಿ ನಡೆಯದು. ಎನ್ಎಂಆರ್ ನಲ್ಲಿ ಹೆಸರು ಹಾಕಿಸಿಕೊಂಡ ನಂತರವೇ ಕೆಲಸಕ್ಕೆ ಬರುವಂತೆ ಸೂಚನೆ ನೀಡಲಾಯಿತು.
ಬೇಸಿಗೆಯಾಗಿರುವುದರಿಂದ ನರೇಗಾ ಯೋಜನೆಯಡಿ ಹೆಚ್ಚಿನ ಕೆಲಸ ನೀಡಲಾಗುತ್ತಿದ್ದು, ಗ್ರಾಮೀಣ ವಾಸಿಗಳೂ ಇದರ ಪ್ರಯೋಜನ ಪಡೆಯಬೇಕು ಎಂದು ಸೂಚಿಸಿದರು. ನರೇಗಾ, ಪಿಡಿಒ, ಗ್ರಾಪಂ ಸಿಬ್ಬಂದಿ, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.