ಮಡಿಕೇರಿ: ವಕ್ರ ಬೆನ್ನು ಹುರಿ ತಪಾಸಣಾ ಶಿಬಿರದ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳುವಂತಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ.ಸತೀಶ್ ಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಗವಾನ್ ಮಹವೀರ್ ಜೈನ್ ಆಸ್ಪತ್ರೆ, ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ೧೮ ವಯಸ್ಸಿನ ಒಳಗಿನ ಮಕ್ಕಳಿಗೆ ಗುರುವಾರ ಡಿಎಚ್‌ಒ ಕಚೇರಿಯಲ್ಲಿ ನಡೆದ ವಕ್ರ ಬೆನ್ನು ಹುರಿ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಗುರುತಿಸಲಾಗಿರುವ ಮಕ್ಕಳನ್ನು ಕರೆಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯಿಂದ ತಜ್ಞವೈದ್ಯರು ಬಂದಿದ್ದು, ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವಶ್ಯಕತೆ ಕಂಡುಬರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ತಪಾಸಣಾ ಶಿಬಿರಕ್ಕೆ ಹಾಜರಾಗಿರುವ ಮಕ್ಕಳ ಪೋಷಕರು ಸದುಪಯೋಗಪಡೆದುಕೊಳ್ಳುವಂತೆ ಕೋರಿದರು.
ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯ ಬೆನ್ನುಹುರಿ ಮೂಳೆ ಶಸ್ತ್ರಚಿಕಿತ್ಸಕ ತಜ್ಞವೈದ್ಯ ಡಾ.ಡಿ.ರಾಘವೇಂದ್ರ ರಾವ್ ಮಾತನಾಡಿ, ಬೆನ್ನುಮೂಳೆಗಳ ವಿರೂಪಗಳು ಮತ್ತು ಡೊಂಕುತನ ಸರಿಪಡಿಸಲು ನಮ್ಮದೇ ಆದ ವೈದ್ಯರ ತಂಡ ರಚಿಸಿಕೊಳ್ಳಲಾಗಿದೆ. ಸಾರ್ವಜನಿಕ ದಾನಿಗಳ ಪ್ರೋತ್ಸಾಹ ಮತ್ತು ಉದ್ಯಮಿಗಳ ಸಹಕಾರದೊಂದಿಗೆ ಇದಕ್ಕೆ ಸಂಬಂಧಿಸಿದಂತೆ ಸುಸಜ್ಜಿತವಾದ ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಉತ್ತಮ ಆಸ್ಪತ್ರೆ ನಡೆಸಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಬೆನ್ನುಹುರಿ ವಿರೂಪಗಳು ಮತ್ತು ಡೊಂಕುತನಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿರೂಪಗಳನ್ನು ೧೮ ವಯಸ್ಸಿನ ಒಳಗೆ ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸಿದಲ್ಲಿ ಮಕ್ಕಳು ಸಾಮಾನ್ಯ ಮಕ್ಕಳಂತೆ ಭವಿಷ್ಯದ ಜೀವನ ನಡೆಸಬಹುದು. ಪ್ರತೀ ವರ್ಷ ೨೦೦ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಗುರಿ ಹೊಂದಿದ್ದು, ಇಲ್ಲಿಯವರೆಗೆ ೧೨೦ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದರು.
ಶಿಬಿರಕ್ಕೆ ಒಟ್ಟು ೮ ಮಕ್ಕಳು ಪೋಷಕರೊಂದಿಗೆ ಹಾಜರಾಗಿದ್ದರು. ಇವರನ್ನು ಪರೀಕ್ಷಿಸಿದ ವೈದ್ಯರು ೬ ಮಕ್ಕಳಿಗೆ ಬೆಂಗಳೂರಿಗೆ ಬಂದು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಹೆಚ್ಚಿನ ವಿರೂಪ ಮಕ್ಕಳನ್ನು ಪತ್ತೆಹಚ್ಚಿದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಮಧುಸೂಧನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಚೇತನ್ ಮತ್ತು ಡಾ.ಇಂದುಧರ ಮತ್ತು ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯ ವ್ಯವಸ್ಥಾಪಕರು, ಶ್ರೀನಿವಾಸ್ ಬಿ.ವಿ ಹಾಗೂ ಆರ್.ಬಿ.ಎಸ್.ಕೆ ತಂಡದ ಎಲ್ಲಾ ವೈದ್ಯರು ಹಾಗೂ ಸಿಬ್ಬಂಧಿಗಳು ಪಾಲ್ಗೊಂಡಿದ್ದರು.